ಕುಂದಾಪುರ,ಜ 12 (DaijiworldNews/MS): ಉಡುಪಿ ಜಿಲ್ಲೆಯಲ್ಲಿ ಬಹುಪ್ರಸಿದ್ಧಿ ಪಡೆದ ಹೆಮ್ಮಾಡಿ ಸೇವಂತಿಗೆಯೂ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳ ಸೂಕ್ತ ಪ್ರೋತ್ಸಾಹ ಸಿಗದೆ ಇಂದು ಅವನತಿಯ ಹಂತ ತಲುಪಿದೆ.
ಭೌಗೋಳಿಕತೆ, ಹವಮಾನ ಹಾಗೂ ತಳಿ ಪ್ರಬೇಧದಿಂದಾಗಿ ಹೆಮ್ಮಾಡಿ ಸೇವಂತಿಗೆ ಬಹು ಪ್ರಸಿದ್ಧ ಪುಷ್ಪ. ಬೆರಳಣೆಕೆಯ ಮಟ್ಟಕ್ಕೆ ಕುಸಿದ ಸೇವಂತಿಗೆಗೆ ಕಳೆದರೆಡು ವರ್ಷಗಳಿಂದ ಕರೋನಾಘಾತಕ್ಕೆ ತುತ್ತಾಗಿದೆ. ಕೊವೀಡ್ ನಿರ್ಬಂಧದಿಂದಾಗಿ ಸ್ಥಳೀಯ ಜಾತ್ರೆ, ಹಬ್ಬಗಳು ನಡೆಯದೇ ಇರುವುದರಿಂದ ಸೇವಂತಿ ಬೆಳೆಗಾರರು ಬಾರೀ ನಷ್ಟ ಅನುಭವಿಸುತ್ತಿದ್ದಾರೆ. ಲಕ್ಷಾಂತರ ರೂಪಾಯಿ ಸಾಲ ಮಾಡಿ ಸೇವಂತಿಗೆ ಬೇಸಾಯ ಮಾಡಿದ ರೈತರು ಮುಂದೇನು ಎಂದು ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ.
ಹೆಮ್ಮಾಡಿ ಸೇವಂತಿಗೆಯೂ ಜನವರಿಯಿಂದ ಮಾರ್ಚ್ ತನಕ ಹೂ ಬಿಡುತ್ತದೆ. ಚಳಿಯ ವಾತಾವರಣದಲ್ಲಿ ಹೆಚ್ಚಾಗಿಯೇ ಫಲಸು ಕೊಡುತ್ತದೆ. ಮಾರಣಕಟ್ಟೆ ಜಾತ್ರೆ ಸೇವಂತಿಗೆ ಬೆಳೆಗಾರರಿಗೆ ದೊಡ್ಡ ಹಬ್ಬ. ತುಳುನಾಡಿನ ಭಕ್ತರು ಬ್ರಹ್ಮಲಿಂಗೇಶ್ವರ ಸ್ವಾಮಿಗೆ ಬುಟ್ಟಿ ಹೂ ಸಮರ್ಪಣೆಗೆ ಆಯ್ಕೆ ಮಾಡುವುದು ಹೆಮ್ಮಾಡಿ ಸೇವಂತಿಗೆಯನ್ನೆ. ಕಳೆದ ಹದಿನಾರು ವರ್ಷದಿಂದ ಸೇವಂತಿಗೆ ಬೇಸಾಯ ಮಾಡುತ್ತಿರುವ ಹೆಮ್ಮಾಡಿಯ ಪ್ರಶಾಂತ್ ಅವರು ಹೇಳುವ ಪ್ರಕಾರ ಒಂದೂವರೆ ಎಕ್ರೆ ಪ್ರದೇಶದಲ್ಲಿ ಸೇವಂತಿಗೆ ಬೇಸಾಯ ಮಾಡುತ್ತಿದ್ದೇನೆ. ಸೆಪ್ಟೆಂಬರ್ನಲ್ಲಿ ನರ್ಸರಿಯಿಂದ ಗಿಡಗಳ ನಾಟಿ ಮಾಡಿ ಸರಿಯಾಗಿ ನಿರ್ವಹಣೆ ಮಾಡಿದರೆ ಜನವರಿಯಿಂದ ಹೂವು ಕೊಯ್ಲಿಗೆ ಬರುತ್ತದೆ. ಕಾಲಮಾನ ನೋಡಿಕೊಂಡು ಮೂರು ಹಂತದಲ್ಲಿ ನಾಟಿ ಮಾಡುತ್ತೇವೆ. ಕಾರ್ಮಿಕರ ವೇತನ, ಗೊಬ್ಬರ, ಕೀಟನಾಶಕಗಳ ದುಬಾರಿಯಿಂದಾಗಿ 1.75 ಲಕ್ಷ ಖರ್ಚಾಗಿದೆ. ಈ ವರ್ಷ ಉತ್ತಮ ಹವಾಮಾನ ಇರುವುದರಿಂದ ಒಳ್ಳೆಯ ಹೂ ಬಿಟ್ಟಿದೆ. ಆದರೆ ಹಬ್ಬ, ಜಾತ್ರೆಗಳಿಲ್ಲದೇ ಆತಂಕ ಎದುರಾಗಿದೆ. ಪ್ರತಿದಿನ ಹೂ ಕೊಯ್ಯಬೇಕು. ಇದಕ್ಕಾಗಿ 30 ಜನ ಕಾರ್ಮಿಕರು ಹೂ ಕೊಯ್ಲು ಮಾಡುತ್ತಾರೆ. 1000 ಹೂವಿನಂತೆ ವೇತನ ನೀಡಬೇಕು. ಹಬ್ಬ, ಜಾತ್ರೆಗೆ ನಿರ್ಬಂಧ ವಿಧಿಸಿದರೆ ನಾವು ಏನು ಮಾಡುವುದು? ಕೊರೋನಾ ಮಾರ್ಗಸೂಚಿಯಂತೆ ಹಬ್ಬ ಮಾಡಲು ಅವಕಾಶ ನೀಡಿದರೆ ನಮ್ಮಂತಹ ಕೃಷಿಕರಿಗೂ ಅನುಕೂಲವಾಗುತ್ತದೆ ಎನ್ನುತ್ತಾರೆ.
ಈಗಾಗಲೇ ನಾವು ಶಾಸಕರನ್ನು ಭೇಟಿಯಾಗಿ ಮನವಿ ಮಾಡಿದ್ದೇವೆ. ಇಲಾಖೆಗಳಿಂದಲೂ ಸಹಕಾರದ ನಿರೀಕ್ಷೆ ಹೊಂದಿದ್ದೇವೆ ಎನ್ನುತ್ತಾರೆ.
ಮಾನ್ಯತೆ ಬೇಕಿದೆ:
ಹೆಮ್ಮಾಡಿ ಸೇವಂತಿಗೆ ಕೃಷಿಯನ್ನು ಉಳಿಸಿ ಬೆಳೆಸುವ ಸಲುವಾಗಿ ಸಾಕಷ್ಟು ಪ್ರಯತ್ನಗಳು ನಡೆದಿವೆ. ಸೇವಂತಿಗೆ ಬೆಳೆಗಾರರ ಸಂಘವನ್ನು ಹೊಂದಿದೆ. ಹೆಮ್ಮಾಡಿ ಸೇವಂತಿಗೆಯ ಬಗ್ಗೆ ಸಮರ್ಪಕ ಅಧ್ಯಯನಗಳು ಕೃಷಿ ವಿಜ್ಞಾನ ಕೇಂದ್ರಗಳು ನಡೆಸಬೇಕಿತ್ತು. ಸಾವಿರಾರು ವರ್ಷಗಳಿಂದ ಈ ಭೂಭಾಗದಲ್ಲಿ ಸೇವಂತಿಗೆ ಕೃಷಿ ಮಾಡುತ್ತಿರುವುದರಿಂದ ಇದರ ಹಿನ್ನೆಲೆ, ತಳಿಯ ಬಗ್ಗೆ ಸೂಕ್ತ ಅಧ್ಯಯನ ಅವಶ್ಯಕತೆ ಇದೆ. ಹತ್ತು ವರ್ಷಗಳ ಹಿಂದೆಯೇ ಅಧ್ಯಯನ ಮಾಡಿದ್ದರೆ ಇಂದು ಹೆಮ್ಮಾಡಿ ಸೇವಂತಿಗೆ ಇಷ್ಟೊಂದು ಹಿನ್ನೆಡೆ ಕಾಣುತ್ತಿರಲ್ಲ. ಅಧ್ಯಯನಗಳ ಮೂಲಕ ಇದರ ಮಹತ್ವ, ವಿಶೇಷತೆಗಳನ್ನು ತಿಳಿಸುವ ಕೆಲಸ ಇನ್ನಾದರೂ ನಡೆಯಬೇಕಾಗಿದೆ.