ಮಂಗಳೂರು, ಜ. 11 (DaijiworldNews/SM): ಮುಂಬರುವ ದಿನಗಳಲ್ಲಿ ಸಿ.ಎನ್.ಜಿ ಇಂಧನ ಆಧಾರಿತ ವಾಹನಗಳು ಹೆಚ್ಚಾಗುವ ಸಾಧ್ಯತೆಗಳಿದ್ದು, ಅದರ ಇಂಧನದ ಮಾರಾಟದ ಪ್ರಮಾಣವೂ ಅಧಿಕವಾಗುವ ಸಂಭವವಿರುವುದರಿಂದ ಆ ಜಿ.ಎನ್.ಜಿ ಇಂಧನದ ಬೆಲೆಯಲ್ಲಿಯೂ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಆಶಯ ವ್ಯಕ್ತಪಡಿಸಿದರು.
ಅವರು ಜ.10ರ ಸೋಮವಾರ ನಗರದ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಿಎನ್ಜಿ ಇಂಧನದ ಕೊರತೆ, ಬೇಡಿಕೆ, ಪೂರೈಕ ಹಾಗೂ ಬೆಲೆ ಏರಿಕೆಯ ಕುರಿತಂತೆ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಸ್ತುತ ಸಿ.ಎನ್.ಜಿ ಇಂಧನ ಪ್ರತಿ ಕೆ.ಜಿ.ಗೆ 63 ರೂ.ಗಳಿದೆ, ಅದನ್ನು ಕೆ.ಜಿಗೆ 57 ರೂಪಾಯಿಗೆ ಇಳಿಕೆ ಮಾಡುವಂತೆ ದಕ್ಷಿಣ ಕನ್ನಡ ಜಿಲ್ಲಾ ಸಿ.ಎನ್.ಜಿ ಬಳಕೆದಾರರ ಸಂಘ ಹಾಗೂ ಮಂಗಳೂರು ನಾಗರೀಕ ಸಮಿತಿಯ ಸದಸ್ಯರು ಮನವಿ ಮಾಡಿದ ಸಂದರ್ಭದಲ್ಲಿ ಜಿಲ್ಲಾಧಿಕಾರಿಯವರು ಇಂಧನ ಬೆಲೆ ಕಡಿಮೆಯಾಗುವ ಭರವಸೆ ನೀಡಿದರು.
ಅಡ್ಯಾರ್ನ ಬಳಿಯಲ್ಲಿರುವ ಸಿ.ಎನ್.ಜಿ ಬಂಕ್ನಲ್ಲಿ ಕಂಪ್ರೆಸರ್ ವ್ಯವಸ್ಥೆ ಇಲ್ಲದ ಕಾರಣ ವಾಹನಗಳಿಗೆ ಇಂಧನ ತುಂಬುವಾಗ ಹೆಚ್ಚಿನ ಸಮಯ ಹಿಡಿಯುತ್ತಿದೆ ಎಂದು ಸಿ.ಎನ್.ಜಿ ಬಳಕೆದಾರರ ಸಂಘದ ಸದಸ್ಯರು ಸಭೆಯಲ್ಲಿ ಪ್ರಸ್ತಾಪಿಸಿದಾಗ, ಮುಂದಿನ ದಿನಗಳಲ್ಲಿ ಕಂಪ್ರೆಸರ್ ವ್ಯವಸ್ಥೆ ಅಳವಡಿಸಿಕೊಳ್ಳಲಾಗುವುದು ಎಂದು ಗೇಲ್, ಬಿ.ಪಿ.ಸಿ.ಎಲ್. ಅಧಿಕಾರಿಗಳು ತಿಳಿಸಿದರು.
ಪಣಂಬೂರಿನಲ್ಲಿರುವ ಸಿ.ಎನ್.ಜಿ ಗ್ಯಾಸ್ ಮದರ್ ಸ್ಟೇಷನ್ನಲ್ಲಿ ವಾಹನಗಳ ಇಂಧನ ಭರ್ತಿ ಮಾಡಿಕೊಳ್ಳಲು ಯಾವುದೇ ಸಮಸ್ಯೆ ಇಲ್ಲ ಎಂದು ಗೇಲ್ ಸಂಸ್ಥೆಯ ಮ್ಯಾನೇಜರ್ ಸಭೆಗೆ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿರುವ ಇತರ ಸಿ.ಎನ್.ಜಿ ಬಂಕ್ಗಳಲ್ಲಿ ಸಿಲಿಂಡರ್ ಮೂಲಕ ಇಂಧನವನ್ನು ಪೂರೈಕೆ ಮಾಡುತ್ತಿರುವುದರಿಂದ ಪೂರ್ಣ ಪ್ರಮಾಣದಲ್ಲಿ ಯಾವುದೇ ಕೊರತೆಯುಂಟಾಗದಂತೆ ಬೇಡಿಕೆಯನುಸಾರವಾಗಿ ಹೆಚ್ಚಿನ ಸಿಲಿಂಡರ್ಗಳನ್ನು ಒದಗಿಸಲು ವ್ಯವಸ್ಥೆ ಮಾಡಿಕೊಳ್ಳುವಂತೆ ಗೇಲ್, ಬಿ.ಪಿ.ಸಿ.ಎಲ್, ಐ.ಓ.ಸಿ.ಎಲ್ ಹಾಗೂ ಎಂ.ಆರ್.ಪಿ.ಎಲ್ನ ಮ್ಯಾನೇಜರ್ಗಳಿಗೆ ಜಿಲ್ಲಾಧಿಕಾರಿಯವರು ಸೂಚಿಸಿದರು.
ಬೇರೆ ಬೇರೆ ಭಾಗಗಳಿಂದ ಆಗಮಿಸುವ ಸಿ.ಎನ್.ಜಿ ಆಧಾರಿತ ಲಾರಿಗಳಿಂದಾಗಿ ಸ್ಥಳೀಯ ವಾಹನಗಳಿಗೆ ಸಿಎನ್ಜಿ ಇಂಧನದ ಕೊರತೆಯುಂಟಾಗುತ್ತಿರುವ ಬಗ್ಗೆ ಕೆಲವು ಸಂಘ ಸಂಸ್ಥೆಗಳಿಂದ ದೂರು ಬಂದ ಹಿನ್ನಲೆಯಲ್ಲಿ, ಸ್ಥಳೀಯ ವಾಹನಗಳಿಗೆ ಸಿ.ಎನ್.ಜಿ ಇಂಧನದ ಕೊರತೆಯಾಗದಂತೆ ಅಗತ್ಯ ಕ್ರಮವಹಿಸಲು ಗೇಲ್ ಸಂಸ್ಥೆಯ ಮ್ಯಾನೇಜರ್ಗೆ ಜಿಲ್ಲಾಧಿಕಾರಿಯವರು ನಿರ್ದೇಶನ ನೀಡಿದರು.
ಪ್ರಾದೇಶಿಕ ಸಾರಿಗೆ ಅಧಿಕಾರಿ ರಮೇಶ್ ಎಂ ವರ್ಣೇಕರ್, ಒ.ಎನ್.ಜಿ.ಸಿ, ಬಿ.ಪಿ.ಸಿ.ಎಲ್, ಎಂ.ಆರ್.ಪಿ.ಎಲ್.ನ ಸಂಸ್ಥೆಯ ಅಧಿಕಾರಿಗಳು, ದಕ್ಷಿಣ ಕನ್ನಡ ಜಿಲ್ಲಾ ಸಿಎನ್ ಜಿ ಬಳಕೆದಾರರ ಸಂಘ ಹಾಗೂ ಮಂಗಳೂರು ನಾಗರೀಕ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ಹಾಜರಿದ್ದರು.