ಕಾರ್ಕಳ, ಜ. 11 (DaijiworldNews/SM): ಹೈನುಗಾರಿಕೆಯನ್ನೇ ಅವಲಂಬಿಸಿ ಜೀವನ ಸಾಗಿಸುತ್ತಿರುವ ಮಿಯ್ಯಾರು ಕಜೆಯ ಯಶೋಧಾ ಆಚಾರ್ಯ ಅವರ ಕುಟುಂಬಕ್ಕೆ ಆಸರೆಯಾಗಿದ್ದ 16 ದನಗಳು ಒಂದೇ ವರ್ಷದಲ್ಲಿ ಗೋಹಂತಕರ ಪಾಲಾಗಿದೆ. ಇದರಿಂದ ವಿಚಲಿತರಾದ ಆ ಕುಂಟುಂಬಕ್ಕೆ ಸಚಿವ ವಿ.ಸುನೀಲ್ ಕುಮಾರ್ ಹಾಗೂ ವಿಶ್ವಹಿಂದುಪರಿಷತ್ ಸಂಘಟನೆ ಗೋವುಗಳನ್ನು ದಾನ ಮಾಡಿ ನೆರವು ನೀಡಿದ್ದಾರೆ.
2022 ಜನವರಿ 6ರ ರ ತಡರಾತ್ರಿ ಕರಿಯಕಲ್ಲು ಕಜೆಯಲ್ಲಿ ಯಶೋಧಾ ಆಚಾರ್ಯರ ಹಟ್ಟಿಯಲ್ಲಿದ್ದ ತುಂಬು ಗಬ್ಬ ಹಸುವೊಂದನ್ನು ಕಟಕರು ಕದ್ದೊಯ್ಯಿದ್ದಾರೆ. ಕಳೆದ ಒಂದು ವರ್ಷದಲ್ಲಿ ಕಳವು ಆಗಿರುವ 16 ಗೋವುಗಳ ಮೌಲ್ಯ ಸುಮಾರು ರೂ.5 ಲಕ್ಷ ಆಗಿತ್ತು. ಈ ಕುರಿತು ಯಶೋಧಾ ಆಚಾರ್ಯ ತನ್ನ ನೋವುನ್ನು ವಿವಿಧ ಸಂಘಟಕರಲ್ಲಿ ತೋಡಿಕೊಂಡಿದ್ದರು. ಯಶೋಧಾ ಅವರ ಅಳಲಿನ ಧ್ವನಿಯು ಸಾಮಾಜಿಕ ಜಾಲಗಳಲ್ಲಿ ಭಾರೀ ವೈರಲ್ ಆಗಿದ್ದು,ಈ ಕುರಿತು ಡಾಯ್ಜಿ ವರ್ಲ್ಡ್ ವರದಿ ಪ್ರಕಟಿಸಿತು.
ಇದಕ್ಕೆ ಸ್ವಂದಿಸಿದ ಸಚಿವ ವಿ.ಸುನೀಲ್ಕುಮಾರ್ ಮಂಗಳವಾರದಂದು ಘಟನಾ ಸ್ಥಳಕ್ಕೆ ಭೇಟಿ ನೀಡಿ ಗೋವುಗಳನ್ನು ದಾನ ರೂಪದಲ್ಲಿ ನೀಡಿ, ಯಶೋಧಾ ಅವರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದ್ದರು.
ಈ ನಡುವೆ ವಿಶ್ವಹಿಂದುಪರಿಷತ್ ಮುಖಂಡ ಇರ್ವತ್ತೂರು ಭಾಸ್ಕರ್ ಎಸ್.ಕೋಟ್ಯಾನ್, ಬಜರಂಗದಳ ರಾಜ್ಯ ಸಂಚಾಲಕ ಸುನೀಲ್ ಕೆ.ಆರ್. ನೇತೃತ್ವದಲ್ಲಿ ಕಾರ್ಯಕರ್ತರು ಯಶೋಧಾ ಅವರ ಮನೆಗೆ ತೆರಳಿ ದನಗಳನ್ನು ದಾನಮಾಡಿ, ಆತ್ಮವಿಶ್ವಾಸ ಮೂಡಿಸಿದ್ದಾರೆ.
ಇದೇ ಮನೆಯ ಸ್ವಲ್ಪ ದೂರದಲ್ಲಿ ಇರುವ ಸುಧಾಕರ ಶೆಟ್ಟಿ ಎಂಬವರ ಮನೆಯ ಹಟ್ಟಿಯಲ್ಲಿ ಕಟ್ಟಿ ಹಾಕಲಾಗಿರುವ ದನಗಳನ್ನು ಕಳ್ಳರು ದರೋಡೆ ಮಾಡಿದ್ದಾರೆ. ಒಂದೇ ವರ್ಷದಲ್ಲಿ ಇದೇ ಮನೆಯ ಕಟ್ಟಿಯಿಂದ ಕಟುಕರು 12 ಹಸುಗಳನ್ನು ದರೋಡೆ ಮಾಡಿ ಎಳೆದು ಹೋಗಿದ್ದಾರೆ ಎಂಬ ಆರೋಪ ಕೇಳಿಬರುತ್ತಿವೆ.