ಮಂಗಳೂರು, ಜ. 11 (DaijiworldNews/SM): ಇತ್ತೀಚೆಗೆ ವಿಟ್ಲದ ಸಲೆತ್ತೂರ್ ನಲ್ಲಿ ನಡೆದ ಕೊರಜ್ಜನಿಗೆ ಅಪಮಾನ ಪ್ರಕರಣದ ಆರೋಪಿಗಳನ್ನು ಜಮಾತಿನಿಂದ ಬಹಿಷ್ಕಾರ ಮಾಡಿ ಪತ್ವಾ ಹೊರಡಿಸಿ ಎಂದು ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಮುಸ್ಲಿಂ ಮುಖಂಡರಿಗೆ ಸವಾಲು ಹಾಕಿದ್ದಾರೆ.
ಬಳಿಕ ಮಾತನಾಡಿದ ಅವರು ಈ ಕೃತ್ಯವು ಹಿಂದೂಗಳ ಧಾರ್ಮಿಕ ನಂಬಿಕೆಗೆ ಘಾಸಿಯನ್ನುಂಟು ಮಾಡಿದೆ. ಸ್ವಾಮಿ ಕೊರಗಜ್ಜನ ಲಕ್ಷಾಂತರ ಭಕ್ತರ ಕಣ್ಣಲ್ಲಿ ನೀರು ಹರಿಸಿದೆ. ಒಂದು ಕಡೆ ಖಂಡಿಸುವ ನಾಟಕವಾಡಿ, ಮತ್ತೊಂದೆಡೆ ಈ ಕೃತ್ಯವನ್ನು ಸಮರ್ಥಿಸುವ ಕೆಲಸ ನಡೆಯುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಮುಸ್ಲಿಂ ಮುಖಂಡರು ಈ ಕೃತ್ಯ ನಡೆಸಿದವರ ಮನೆಗೆ ತೆರಳಿ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿರುವುದು ಅತ್ಯಂತ ಖಂಡನೀಯ ಎಂದರು.
ಮುಸಲ್ಮಾನರಿಗೆ ನಿಜವಾದ ಕಳಕಳಿ ಇದ್ದಲ್ಲಿ ತಪ್ಪಿತಸ್ಥರ ವಿರುದ್ಧ ಫತ್ವಾ ಹೊರಡಿಸಲಿ. ಇಲ್ಲವಾದಲ್ಲಿ ಜಮಾತೆಯಿಂದ ಹೊರಗೆ ಹಾಕುವ ಕೆಲಸ ಮಾಡಲಿ. ಮುಸ್ಲಿಂ ಸಮುದಾಯದ ಮುಖಂಡರಿಗೆ ಇದು ನನ್ನ ಸವಾಲು ಎಂದು ಶರಣ್ ಪಂಪ್ವೆಲ್ ಹೇಳಿದ್ದಾರೆ.
ಹಿಂದೂ ಬಾಂಧವರು ವೀಡಿಯೋ, ಫೋಟೋ ಎಡಿಟ್ ಮಾಡಿ ವಿಕೃತಿ ಮೆರೆಯಬಾರದು. ದೈವಸ್ಥಾನಗಳಲ್ಲಿ ಫೋಟೊ, ವೀಡಿಯೋ ನಿಷೇಧಿಸುವಂತೆ ಮನವಿ ಮಾಡುತ್ತೇವೆ. ಪೈಗಂಬರ ವೇಷ ಹಾಕಿ ನೃತ್ಯ ಮಾಡಿದ್ರೆ ಒಪ್ಪುತ್ತಾರಾ? ನಮಗೆ ಗೊತ್ತಿದೆ ಅವರ ಭಾವನೆಗೆ ಧಕ್ಕೆ ತರಬಾರದು. ಬಪ್ಪ ಬ್ಯಾರಿಯ ವೇಷಧಾರಿ ಟ್ಯಾಬ್ಲೋದಲ್ಲಿ ಟೋಪಿ ಹಾಕಿದ್ದಕ್ಕೆ ವಿರೋಧಿಸಿದ್ದರು. ಬಜ್ಪೆಯ ಶೋಭಾಯಾತ್ರೆ ಸಂದರ್ಭ ವಿರೋಧ ವ್ಯಕ್ತಪಡಿಸಿದ್ರು. ಮದುವೆ ಕಾರ್ಯಕ್ರಮದಲ್ಲಿ ವಿಕೃತಿ ಮೆರೆದರೆ ನಾವು ಸುಮ್ಮನೆ ಕೂರಬೇಕಾ? ಡಿಜೆ ಹಳ್ಳಿ, ಕೆಜೆ ಹಳ್ಳಿಯಲ್ಲಿ ಏನು ನಡೆದಿದೆ ನೆನಪಿದೆ ನಮಗೆ ಮುಂದಕ್ಕೆ ಇಂತಹ ಕೃತ್ಯ ನಡೆದಲ್ಲಿ ಖಂಡಿತಾ ಸಹಿಸೋದಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.