ಉಡುಪಿ, ಡಿ 05(SM): ರಾಮ ಮಂದಿರ ನಿರ್ಮಾಣಕ್ಕೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ವತಿಯಿಂದ ಉಡುಪಿಯಲ್ಲಿ ಡಿ. 2ರಂದು ನಡೆದ ಜನಾಗ್ರಹ ಸಭೆಯಲ್ಲಿ ಇಸ್ಲಾಮ್ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಭಾಷಣ ಮಾಡಿದ ವಿಎಚ್ಪಿ ದಕ್ಷಿಣ ಪ್ರಾಂತ ವಿಶೇಷ ಸಂಪರ್ಕ ಪ್ರಮುಖ್ ಮಂಜುನಾಥ ಸ್ವಾಮಿ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಜುನಾಥ್ ಸ್ವಾಮಿ ಹೇಳಿಕೆಯು ಸಮಾಜದ ಶಾಂತಿಯನ್ನು ಮತ್ತು ಸಾಮರಸ್ಯವನ್ನು ಕದಡುವ ಹಾಗೂ ಹಾಳು ಮಾಡುವ ಉದ್ದೇಶವನ್ನು ಹೊಂದಿದ್ದು, ಆದುದರಿಂದ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸುವಂತೆ ಒತ್ತಾಯಿಸಿ ಉಡುಪಿಯ ಅನ್ಸಾರ್ ಅಹ್ಮದ್ ಅವರು ದೂರು ನೀಡಿದ್ದರು.
ಅವರ ದೂರಿನಂತೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅವರ ಈ ಹೇಳಿಕೆ ಇಸ್ಲಾಮ್ ಧರ್ಮಕ್ಕೆ ಮಾಡಿರುವ ಅವಮಾನವಾಗಿದ್ದು, ಇದರಿಂದ ಮುಸ್ಲಿಮರ ಮನಸ್ಸಿಗೆ ಅತೀವ ನೋವಾಗಿದೆ ಎಂದು ದೂರಲಾಗಿದೆ. ಮುಸ್ಲಿಮರಿಗೆ ನಮಾಝ್ ಮಾಡಲು ಮಸೀದಿಯ ಅಗತ್ಯವೇ ಇಲ್ಲ. ಅವರು ಶೌಚಾಲಯದಲ್ಲೂ ನಮಾಝ್ ಮಾಡಬಹುದು ಎಂದು ಮಂಜುನಾಥ್ ಸ್ವಾಮಿ ತನ್ನ ಭಾಷಣದಲ್ಲಿ ಹೇಳಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ದೂರು ನೀಡುವ ಸಂದರ್ಭ ಮಂಜುನಾಥ್ ಸ್ವಾಮಿ ಭಾಷಣ ಮಾಡಿರುವ ಸಿಡಿಯ ಪ್ರತಿಯನ್ನು ಕೂಡ ಒದಗಿಸಲಾಗಿದೆ.