ಮಂಗಳೂರು, ಜ 11 (DaijiworldNews/MS): ಹಿಂದುಗಳ ಶ್ರದ್ಧಾ ಕೇಂದ್ರ, ಹಿಂದು ಧಾರ್ಮಿಕ ಆಚರಣೆಗಳನ್ನು ಅಪಹಾಸ್ಯ ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಸರಕಾರವು ದುಷ್ಕರ್ಮಿಗಳ ಮೇಲೆ ಕ್ರಮ ಜರಗಿಸುತ್ತದೆ ಎಂದು ಶಾಸಕ ವೇದವ್ಯಾಸ್ ಕಾಮತ್ ಅವರು ಹೇಳಿದ್ದಾರೆ.
ಹಿಂದು ಧಾರ್ಮಿಕ ಭಾವನೆಗಳಿಗೆ ಚ್ಯುತಿ ತಂದಿರುವವರ ವಿರುದ್ಧ ವಿಶ್ವ ಹಿಂದು ಪರಿಷತ್ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಹಮ್ಮಿಕೊಂಡ ಸಾಮೂಹಿಕ ಪ್ರಾರ್ಥನೆಯ ನಂತರ ಮಾತನಾಡಿದ ಶಾಸಕ ವೇದವ್ಯಾಸ್ ಕಾಮತ್, ಜಿಲ್ಲೆಯ ಕೆಲವೊಂದು ಕಡೆಗಳಲ್ಲಿ ಹಿಂದು ಧಾರ್ಮಿಕ ಶ್ರದ್ಧಾ ಕೇಂದ್ರಗಳನ್ನು ಅಪವಿತ್ರಗೊಳಿಸಿರುವ ಕುರಿತು ದೇವರ ಸಾನಿಧ್ಯದಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಿದ್ದೇವೆ. ಉದ್ಧೇಶ ಪೂರ್ವಕವಾಗಿ ಧಾರ್ಮಿಕ ಶ್ರದ್ಧಾ ಕೇಂದ್ರಗಳನ್ನು ಅಪವಿತ್ರಗೊಳಿಸುವುದು, ಹಿಂದುಗಳ ಭಾವನೆಯನ್ನು ಕೆರಳಿಸುವವರಿಗೆ ಕಾನೂನಿನಡಿ ಶಿಕ್ಷೆ ನೀಡಲು ಸರಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರಾದ ಜಯಶ್ರೀ ಕುಡ್ವ, ಸಂಧ್ಯಾ ಮೋಹನ್ ಆಚಾರ್, ಕಿರಣ್ ಕುಮಾರ್ ಕೋಡಿಕಲ್, ವಿಶ್ವ ಹಿಂದು ಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ವೆಲ್, ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲ ಅಧ್ಯಕ್ಷರಾದ ವಿಜಯ್ ಕುಮಾರ್ ಶೆಟ್ಟಿ, ವಿಶ್ವ ಹಿಂದು ಪರಿಷತ್ ಜಿಲ್ಲಾ ಪ್ರಚಾರ ಪ್ರಮುಖ್ ಪ್ರದೀಪ್ ಸರಿಪಲ್ಲ, ಬಜರಂಗದಳ ಜಿಲ್ಲಾ ಸಂಯೋಜಕ ಪುನೀತ್ ಅತ್ತಾವರ, ವಿಶ್ವ ಹಿಂದು ಪರಿಷತ್ ಪ್ರಖಂಡ ಕಾರ್ಯದರ್ಶಿ ವಸಂತ್ ಶೇಟ್, ಬಜರಂಗದಳ ಪ್ರಖಂಡ ಸಂಯೋಜಕ ಸತೀಶ್ ಶೆಟ್ಟಿ ಕೋಡಿಕಲ್, ಪ್ರಖಂಡ ಗೋರಕ್ಷಾ ಪ್ರಮುಖ್ ಮಹೇಶ್ ಕೋಡಿಕಲ್, ಬಿಜೆಪಿ ಮುಖಂಡರಾದ ರಮೇಶ್ ಹೆಗ್ಡೆ, ಭವಾನಿ ಶಂಕರ್, ವಸಂತ್ ಜೆ ಪೂಜಾರಿ, ರಾಜೇಂದ್ರ ಕುಮಾರ್, ಮೋಹನ್ ಆಚಾರ್, ವಿಜಯ್ ಭಂಡಾರಿ, ಪ್ರವೀಣ್ ಕುದ್ರೋಳಿ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.