ಉಡುಪಿ, ಜ 11 (DaijiworldNews/MS): ಕೋವಿಡ್ -19 ಮಹಾಮಾರಿ ಹಾಗೂ ಮೇಕೆದಾಟು ಪಾದಯಾತ್ರೆ ವಿಚಾರದಲ್ಲಿ ರಾಜ್ಯ ಬಿಜೆಪಿ ಸರಕಾರ ಹಾಗೂ ಪ್ರತಿಪಕ್ಷದ ಕಾಂಗ್ರೆಸ್ ನಾಯಕರು ಬೇಜವಾಬ್ದಾರಿ ವರ್ತನೆ ತೋರಿದ್ದು ಕೂಡಲೇ ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ಮಧ್ಯಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷರಾದ ಯೋಗೀಶ್ ಶೆಟ್ಟಿಯವರು ಆಗ್ರಹಿಸಿದರು.
ಅವರು ಇಂದು ಉಡುಪಿ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಆರಂಭಿಸಿದ ಮೇಕೆದಾಟು ಪಾದಯಾತ್ರೆ ಕೇವಲ ರಾಜಕೀಯ ಗಿಮಿಕ್ ಆಗಿದ್ದು ಕೋವಿಡ್ ಶಿಷ್ಟಾಚಾರ, ಸ್ಥಳೀಯಾಡಳಿತ ಹೇರಿದ ನಿಷೇಧಾಜ್ಞೆ ಉಲ್ಲಂಘನೆ ಜತೆಗೆ ಜನರ ಜೀವನದ ಜತೆ ಚೆಲ್ಲಾಟವಾಡುತ್ತಿದೆ . ಕಾಂಗ್ರೆಸ್ ನಾಯಕರು ಕೋವಿಡ್ ಸೋಂಕು ಬರುತ್ತಿರುವ ಈ ಕಾಲಘಟ್ಟದಲ್ಲಿ ಮೇಕೆದಾಟು ಪಾದಯಾತ್ರೆ ಕೈಬಿಟ್ಟು ಜನರ ಕಷ್ಟಕ್ಕೆ ನೆರವಾಗುವ ಬದಲು ಮತ್ತಷ್ಟು ಸಂಕಷ್ಟ ತಂದೊಡ್ಡುವ ಪರಿಸ್ಥಿತಿ ತಂದೊಡ್ಡುತ್ತಿದೆ. ಪ್ರಾದೇಶಿಕ ಪಕ್ಷಗಳಿಗೆ ರಾಜ್ಯದ ಜನತೆ ಅಷ್ಟೊಂದು ಬೆಂಬಲ ಕೊಟ್ಟಿಲ್ಲ. ಅದರ ಪರಿಣಾಮವಾಗಿ ಮಹಾರಾಷ್ಟ್ರ , ಗೋವಾ, ಕೇರಳ , ಆಂಧ್ರಪ್ರದೇಶದಿಂದ ಬಹಳಷ್ಟು ನೀರಿನ ಸಮಸ್ಯೆ ಎದುರಿಸುತ್ತಿದ್ದೇವೆ . ಎರಡೂ ರಾಷ್ಟೀಯ ಪಕ್ಷಗಳ ಆಡಳಿತ ಕೈಯಲ್ಲಿದ್ದಾಗ ನೀರಿನ ಸಮಸ್ಯೆ ಬಗೆ ಹರಿಸುವ ಪ್ರಯತ್ನ ಮಾಡಿಲ್ಲ ಎಂದು ಆರೋಪಿದರು.
ಜಾರಿಯಲ್ಲಿರುವ ನೈಟ್ ಕಪ್ಯೂ, ವೀಕೆಂಡ್ ಕಪ್ಯೂಗಳೆಲ್ಲವೂ ಬಡಜನರಿಗಷ್ಟೇ ಸೀಮಿತ. ಎರಡು ರಾಷ್ಟೀಯ ಪಕ್ಷಗಳಿಗೆ ಅನ್ವಯವಾಗುವುದಿಲ್ಲ. ನಾಡಿನ ಜನತೆ ಇದನ್ನು ಗಮನಿಸ್ತಾ ಇದ್ದಾರೆ. ಅಪಾಯಕಾರಿ ಪಾದಯಾತ್ರೆ ಕೈ ಬಿಡದಿದ್ದರೆ , ರಾಜ್ಯ ಬಿಜೆಪಿ ಸರಕಾರ ಯಾವುದೇ ಕ್ರಮ ಕೈಗೊಳ್ಳದೆ ಇದ್ದರೆ ಜೆಡಿಎಸ್ ಹೈಕೋರ್ಟಿನಲ್ಲಿ ದಾವೆ ಹೂಡುವ ಚಿಂತನೆಯಿದೆ . ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ಕಾರ್ಮಿಕ ವರ್ಗಕ್ಕೆ ಸರಕಾರ ಆರ್ಥಿಕ ನೆರವು, ಪ್ಯಾಕೇಜ್ ಘೋಷಿಸಬೇಕು ಎಂದು ಒತ್ತಾಯಿಸಿದರು
ಜ, 17, 18 ರಂದು ಉಡುಪಿ ಪರ್ಯಾಯ ವೈಭವದಿಂದ ನಡೆಸಲು ಸಿದ್ಧತೆಗಳಾಗಿದ್ದು ಈ ನಿಟ್ಟಿನಲ್ಲಿ ಧಾರ್ಮಿಕ ಸಂಪ್ರದಾಯ ಆಚರಣೆಗೆ ಕೋವಿಡ್೧೯ ಹೆಸರಲ್ಲಿ ಯಾವುದೇ ಅಡೆತಡೆ ಒಡ್ಡುವ ಯತ್ನ ಸಲ್ಲದು. ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಪ್ರಮಾಣ, ತೀವ್ರತೆ ಕಡಿಮೆಯಿದ್ದು ರಾಜ್ಯ ಸರಕಾರ ಜಿಲ್ಲಾಡಳಿತಕ್ಕೆ ಉಡುಪಿ ಪರ್ಯಾಯ ಸುಗಮವಾಗಿ ನಡೆಸುವ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳುವ ಅಧಿಕಾರ ನೀಡಬೇಕು ಎಂದು ಯೋಗೀಶ್ ಶೆಟ್ಟಿ ತಿಳಿಸಿದರು.
ಜಿಲ್ಲಾ ಜೆಡಿಎಸ್ ನ ಕಾರ್ಯಾಧ್ಯಕ್ಷರಾದ ವಾಸುದೇವ ರಾವ್, ಪ್ರಧಾನ ಕಾರ್ಯದರ್ಶಿಯವರಾದ ಜಯರಾಮ ಆಚಾರ್ಯ, ರಕ್ಷತ್ ಶೆಟ್ಟಿ, ಗೋಪಾಲ್ ಅತ್ರಾಡಿ, ಬಾಲಕೃಷ್ಣ ಆಚಾರ್ಯ, ಗಂಗಾಧರ್ ಬಿರ್ತಿ ಉಪಸ್ಥಿತರಿದ್ದರು.