ಮಂಗಳೂರು, ಜ 11 (DaijiworldNews/MS): ಕೋವಿಡ್ ಸಾಂಕ್ರಮಿಕ ರೋಗವನ್ನು ಎದುರಿಸಲು ವಾರಾಂತ್ಯದ ಕರ್ಫ್ಯೂ ಮತ್ತು ಲಾಕ್ಡೌನ್ ಪರಿಹಾರವಲ್ಲ, ಸರ್ಕಾರ ಪರ್ಯಾಯ ಯೋಜನೆ ಜಾರಿಗೆ ತರಬೇಕುಎಂದು ಮಾಜಿ ಶಾಸಕ ರಮಾನಾಥ್ ರೈ ಹೇಳಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಜ. 11 ರ ಮಂಗಳವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು,ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರ ವಿಧಿಸುವ ವಾರಾಂತ್ಯದ ಕರ್ಫ್ಯೂ ಮತ್ತು ಲಾಕ್ಡೌನ್ ಮುಂತಾದ ಕಠಿಣ ಕ್ರಮಗಳು ಸಾರ್ವಜನಿಕರ ಮೇಲೆ ಪರಿಣಾಮ ಬೀರುತ್ತದೆ. ಈ ಹಿಂದೆ ವಿಧಿಸಲಾಗಿದ್ದ ಲಾಕ್ಡೌನ್ನಿಂದ ಬಹಳಷ್ಟು ಜನರು ಉದ್ಯೋಗ, ವ್ಯವಹಾರಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜನಜೀವನಕ್ಕೆ ತೊಂದರೆಯಾಗುವಂತ ವಾರಾಂತ್ಯದ ಕರ್ಫ್ಯೂ ಮತ್ತು ಲಾಕ್ಡೌನ್ ವಿಧಿಸುವ ಮುನ್ನ ಸರ್ಕಾರ ಮರುಚಿಂತನೆ ಮಾಡಬೇಕು ಎಂದು ಹೇಳಿದ್ದಾರೆ.
"ಲಾಕ್ಡೌನ್, ವಿಕೇಂಡ್ ಕರ್ಫ್ಯೂ ವಿಧಿಸುವುದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ. ಯಕ್ಷಗಾನ ಕಲಾವಿದರು ಸಂಕಷ್ಟದಲ್ಲಿದ್ದಾರೆ. ಕೋವಿಡ್ ನಿಯಂತ್ರಣಕ್ಕೆ ಯಾವುದೇ ಅನುಭವ ಇಲ್ಲದಿರುವುದೇ ಲಾಕ್ಡೌನ್ಗೆ ಕಾರಣವಾಯಿತು ಎಂದು ಡಾ ಸುಧಾಕರ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈಗಾಗಲೇ ಲಾಕ್ಡೌನ್ ಮತ್ತು ನೋಟು ಅಮಾನ್ಯೀಕರಣದ ಸಂದರ್ಭದಲ್ಲಿ ಅನೇಕರ ಸಾವಿಗೆ ನಾವು ಸಾಕ್ಷಿಯಾಗಿದ್ದೇವೆ. ಹೀಗಾಗಿ ಸರ್ಕಾರವು ಲಾಕ್ಡೌನ್ ಮತ್ತು ವಾರಾಂತ್ಯದ ಕರ್ಫ್ಯೂ ಜಾರಿಗೆ ತರುವ ಮುನ್ನ ಮುಂದಾಲೋಚಿಸಿಬೇಕು. ಸಾಂಕ್ರಾಮಿಕ ರೋಗವನ್ನು ಎದುರಿಸಲು ಸರ್ಕಾರ ಪರ್ಯಾಯ ಮಾರ್ಗ ಜಾರಿಗೆ ತರಬೇಕು. ಯಾವುದೇ ನಿರ್ಬಂಧ ವಿಧಿಸುವ ಮುನ್ನ ಸರ್ಕಾರ ಸಾರ್ವಜನಿಕರಿಗೂ ಸೂಕ್ತ ಸೌಲಭ್ಯಗಳನ್ನು ನೀಡಬೇಕು " ಎಂದು ರೈ ಸಲಹೆ ನೀಡಿದ್ದಾರೆ.
ಕಾಂಗ್ರೆಸ್ ಪಾದಯಾತ್ರೆ ಒಂದು ನಾಟಕ ಎಂಬ ನಳಿನ್ ಹೇಳಿಕೆಗೆ ಪ್ರತಿಕ್ರಿಯಿಸಿದ ರೈ, "ಎತ್ತಿನಹೊಳೆ ವಿರುದ್ಧ ಬಿಜೆಪಿ ಪಾದಯಾತ್ರೆ ನಡೆಸಿದ್ದು ದೊಡ್ಡ ನಾಟಕ. ಮೂರನೇ ಅಲೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಹಲವು ಚುನಾವಣಾ ರ್ಯಾಲಿಗಳಲ್ಲಿ ಭಾಗವಹಿಸಿದ್ದರು" ಎಂದು ಆರೋಪಿಸಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಕಾರ್ಪೊರೇಟರ್ ಶಶಿಧರ್ ಹೆಗ್ಡೆ, ಹರಿನಾಥ್ ಮತ್ತಿತರರು ಉಪಸ್ಥಿತರಿದ್ದರು.