ಮಂಗಳೂರು, ಜ 11 (DaijiworldNews/MS): ಮಂಗಳೂರು ವಿಧಾನ ಸಭೆ ಕ್ಷೇತ್ರದ ಪಜೀರ್ ಗ್ರಾಮದ ಸಾಂಬಾರ್ ತೋಟ ಬೂತ್ ಸಂಖ್ಯೆ 109 ರ ಅಧ್ಯಕ್ಷ , ಬಿಜೆಪಿಯ ಯುವ ನಾಯಕ ನ್ಯಾಯಾವಾದಿ ಮಹಮ್ಮದ್ ಅಸ್ಗರ್ ಅವರನ್ನು ಭಾರತೀಯ ಜನತಾ ಪಕ್ಷದಿಂದ ಜ.11ರ ಮಂಗಳವಾರದಂದು ಅಮಾನತು ಮಾಡಲಾಗಿದೆ.
ಜಿಲ್ಲಾಧ್ಯಕ್ಷರ ಸೂಚನೆಯ ಮೇರೆಗೆ ಬಿಜೆಪಿ ಪಕ್ಷದಿಂದ ಈ ತತ್ಕ್ಷಣದಿಂದ ಅಮಾನತುಗೊಳಿಸಲಾಗಿದೆ ಎಂದು ಬಿಜೆಪಿ ಮಂಗಳೂರು ಮಂಡಲಾಧ್ಯಕ್ಷರು ಆದೇಶ ಹೊರಡಿಸಿದ್ದಾರೆ. ಪಕ್ಷದ ಶಿಸ್ತನ್ನು ಉಲ್ಲಂಘಿಸಿದ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಅಮಾನತು ಮಾಡಿರುವ ಆದೇಶವನ್ನು ಮಹಮ್ಮದ್ ಅಸ್ಗರ್ ಹಾಗೂ ಮಂಗಳೂರು ಬಿಜೆಪಿ ಮಂಡಲ ಅಧ್ಯಕ್ಷ ಚಂದ್ರಕಾಂತ್ ಪಂಡಿತ್ ಹೌಸ್ ಅವರಿಗೆ ಪತ್ರ ಬರೆದು ಸುದರ್ಶನ್ ತಿಳಿಸಿದ್ದಾರೆ.
ವಿಟ್ಲದ ಸಾಲೆತ್ತೂರಿನ ಜ. 6 ರಂದು ನಡೆದ ಔತಣಕೂಟದಲ್ಲಿ ಭಾಗವಹಿಸಿದ ಅನ್ಯಕೋಮಿನ ಮದುಮಗ ತುಳುನಾಡಿನ ಆರಾಧ್ಯ ದೈವ ಕೊರಗಜ್ಜನಿಗೆ ಅವಮಾನ ಮಾಡಿದ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದರ ತನಿಖೆ ನಡೆಸುತ್ತಿದ್ದ ವಿಟ್ಲ ಠಾಣೆ ಪೊಲೀಸರು ಮದುಮಗ ಬಾಷಿತ್ ಸಹೋದರ ಅರ್ಷಾದ್ ನನ್ನು ಜ .8 ರಂದು ಮಂಜೇಶ್ವರದದ ವಶಕ್ಕೆ ಪಡೆದು ವಿಟ್ಲ ಠಾಣೆಗೆ ಕರೆ ತಂದು ವಿಚಾರಣೆ ನಡೆಸಿದ್ದರು . ಬಳಿಕ ಸಂಜೆ ವೇಳೆ ಆತನನ್ನು ಬಿಟ್ಟು ಕಳುಹಿಸಿದ್ದರು. ಆರೋಪಿಯ ಸಹೋದರನ ಬಿಡುಗಡೆಯಲ್ಲಿ ಮಹಮ್ಮದ್ ಅಸ್ಗರ್ ಕೈವಾಡವಿದೆಯೆಂಬ ಗುಲ್ಲು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿತ್ತು. ಬಿಜೆಪಿ ಹಾಗೂ ಹಿಂದೂ ಸಂಘಟನೆಯ ಕಾರ್ಯಕರ್ತರು ಜಿಲ್ಲಾ ಬಿಜೆಪಿ ಮುಖಂಡರಲ್ಲಿ ಅಸ್ಗರ್ ನಡೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಇದಾದ ಬಳಿಕ ಇದೀಗ ಜಿಲ್ಲಾ ಬಿಜೆಪಿ ಅಧ್ಯಕ್ಷರು ಮಹಮ್ಮದ್ ಅಸ್ಗರ್ ಅವರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ. ಆದರೆ ಈ ಅಮಾನತು ಸಾಲೆತ್ತೂರು ಪ್ರಕರಣಕ್ಕೆ ಸಂಬಂಧಿಸಿ ನಡೆದಿದೆಯೇ ಎಂಬ ಬಗ್ಗೆ ಬಿಜೆಪಿ ಜಿಲ್ಲಾಧ್ಯಕ್ಷರು ಯಾವುದೇ ಸ್ಪಷ್ಟನೆ ನೀಡಿಲ್ಲ.