ನವದೆಹಲಿ,ಡಿ 05 (MSP): ಭಾರತದ ಪೌಲ್ಟ್ರಿ ಸೆಕ್ಟರ್ನಲ್ಲಿ ಕೋಳಿಗಳನ್ನು ಕೊಬ್ಬಿಸಲು ಹಾಗೂ ನೈಸರ್ಗಿಕ ರೀತಿ ಬಿಟ್ಟು, ಅತ್ಯಂತ ವೇಗವಾಗಿ ಬೆಳೆಯಲು ಪೂರಕವಾಗಿ ನೀಡುವ ಆ್ಯಂಟಿಬಯೋಟಿಕ್ ಕೊಲಿಸ್ಟಿನ್ ಅನ್ನು ನಿಷೇಧಿಸಲು ಕೇಂದ್ರ ಸರ್ಕಾರ ಮುಂದಡಿ ಇಟ್ಟಿದೆ. ನವೆಂಬರ್ 29ರಂದು ಭಾರತದ ಔಷಧಿ ತಾಂತ್ರಿಕ ಸಲಹಾ ಮಂಡಳಿ ನಡೆಸಿದ ಸಭೆಯಲ್ಲಿ ಅಂತಿಮವಾಗಿ ಆರೋಗ್ಯದ ದೃಷ್ಟಿಯಿಂದ ಕೊಲಿಸ್ಟಿನ್ ನಿಷೇಧದ ತೀರ್ಮಾನಕ್ಕೆ ಬರಲಾಗಿದೆ.
ಕೋಳಿ ಉದ್ಯಮ ಹಾಗೂ ಹೈನುಗಾರಿಕೆಯಲ್ಲಿ ಬಳಸಲಾಗುವ ಕೊಲಿಸ್ಟಿನ್ ಪ್ರಭಾವದಿಂದಲೇ ಮನುಷ್ಯರಲ್ಲಿಯೂ ಆ್ಯಂಟಿಬಯೋಟಿಕ್ ರೆಸಿಸ್ಟೆನ್ಸ್ ಕಂಡುಬರುತ್ತಿದೆ ಎಂದು ತಿಳಿದು ಬಂದಿದೆ. ಸಾಮಾನ್ಯವಾಗಿ ರೋಗಿಗಳಿಗೆ ಆ್ಯಂಟಿ ಬಯೋಟಿಕ್ ಔಷಧಿಗಳು ಕೆಲಸ ಮಾಡದೇ ಇದ್ದಾಗ ಕೊನೆಯ ಪ್ರಯತ್ನವಾಗಿ ಕೊಲಿಸ್ಟಿನ್ ನೀಡಲಾಗುತ್ತದೆ. ಈ ಹಿಂದೆ ಕೋಳಿ ಉದ್ಯಮದಲ್ಲಿ ಆ್ಯಂಟಿಬಯಾಟಿಕ್ಸ್ ಬಳಕೆ ನಿತ್ಯನಿರಂತರವಾಗಿದ್ದು, ದೇಶದ ಜನರ ಆರೋಗ್ಯ ಆಪತ್ತಿನಲ್ಲಿದೆ ಎಂದು ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್ವಿರಾನ್ಮೆಂಟ್ (ಸಿಎಸ್ಇ) ಎಚ್ಚರಿಸಿತ್ತು. ಅಲ್ಲದೆ ಲಂಡನ್ ಮೂಲದ ಪತ್ರಿಕಾ ತನಿಖಾ ವರದಿಯೊಂದು ಭಾರತದಲ್ಲಿ ಕೋಳಿಗಳಿಗೆ ಅತ್ಯಂತ ಹೆಚ್ಚು ಪರಿಣಾಮ ಬೀರುವ ಆ್ಯಂಟಿ ಬಯೋಟಿಕ್ ಔಷಧಿಗಳನ್ನು ನೀಡಲಾಗುತ್ತಿದೆ ಎಂದು ಪತ್ತೆ ಹಚ್ಚಿತ್ತು.
ಇದೀಗಾ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಪಶುವೈದ್ಯಕೀಯ ಇಲಾಖೆ, ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯ ಹಾಗೂ ಭಾರತದ ಡ್ರಗ್ಸ್ ಕಂಟ್ರೋಲರ್ , ದೇಶದ ಜನರ ಆರೋಗ್ಯ ದೃಷ್ಟಿಯಲ್ಲಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು ಕೊಲಿಸ್ಟಿನ್ ಉಪಯೋಗಿಸುವಂತಿಲ್ಲ ಎನ್ನುವ ತೀರ್ಮಾನಕ್ಕೆ ಬಂದಿದೆ.