ಉಡುಪಿ, ಜ.10 (DaijiworldNews/PY): "ಪರ್ಯಾಯದಲ್ಲಿ ಪಾಲ್ಗೊಳ್ಳುವ ಭಕ್ತರಿಗೆ ಎರಡು ಡೋಸ್ ಕಡ್ಡಾಯ. ರಾಜಾಂಗಣದ ಒಳಗೆ ಸೀಮಿತ ಸಂಖ್ಯೆಯವರಿಗೆ ಪ್ರವೇಶಕ್ಕೆ ಅವಕಾಶ" ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.
ಉಡುಪಿ ಜಿಲ್ಲಾ ಪಂಚಾಯತ್ ಸಭಾಂಗಣಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, "ಸಾರ್ವಜನಿಕ ಹಿತಾಸಕ್ತಿಯಿಂದ ಪುರಪ್ರವೇಶ ಹಾಗೂ ಪರ್ಯಾಯ ಮಹೋತ್ಸವ ಆಚರಣೆಗೆ ಕೃಷ್ಣಾಪುರದ ಸ್ವಾಮೀಜಿಗಳೇ ನಿರ್ಬಂಧನೆಯನ್ನು ಹಾಕಿಕೊಂಡಿದ್ದಾರೆ" ಎಂದಿದ್ದಾರೆ.
"17ರ ಸಂಜೆ ನಗರದ ಬೇರೆ ಬೇರೆ ಭಾಗಗಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅವಕಾಶ ಇಲ್ಲ. 17ರ ತಡರಾತ್ರಿ ನಡೆಯುತ್ತಿದ್ದ ಎಲ್ಲ ಕಾರ್ಯಕ್ರಮಗಳು 9 ಗಂಟೆಗೆ ಸೀಮಿತ ಮಾಡಲಾಗಿದೆ" ಎಂದು ಹೇಳಿದ್ದಾರೆ.
"ಪರ್ಯಾಯದ ಮೆರವಣಿಗೆಯಲ್ಲಿ ಸೀಮಿತ ತಂಡಗಳಿಗೆ ಮಾತ್ರ ಅವಕಾಶ. ಅತ್ಯಂತ ಕಡಿಮೆ ಕಲಾ ತಂಡಗಳ ಭಾಗವಹಿಸುವಿಕೆ ಇದ್ದು, ಧಾರ್ಮಿಕತೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ರಾಜಾಂಗಣದ ಒಳಗೆ ಸೀಮಿತ ಸಂಖ್ಯೆಯವರಿಗೆ ಪ್ರವೇಶಕ್ಕೆ ಮಾತ್ರವೇ ಅವಕಾಶ. ಪರ್ಯಾಯದಲ್ಲಿ ಪಾಲ್ಗೊಳ್ಳುವ ಭಕ್ತರಿಗೆ ಎರಡು ಡೋಸ್ ಕಡ್ಡಾಯ" ಎಂದು ತಿಳಿಸಿದ್ದಾರೆ.
"ಹೊರಜಿಲ್ಲೆಯಿಂದ ಬಹಳ ಕಡಿಮೆ ಸಂಖ್ಯೆ ಭಕ್ತರು ಬರಬೇಕು ಹಾಗೂ ನೇರಪ್ರಸಾರದ ವೀಕ್ಷಣೆಗೆ ಅವಕಾಶ ಕೊಟ್ಟಿದ್ದೇವೆ. ದೇವರ ದರ್ಶನಕ್ಕೆ ಸರಿಯಾದ ವ್ಯವಸ್ಥೆ ಮಾಡಲಿದ್ದೇವೆ. ಆದರೆ, ಉತ್ಸವ ಹಾಗೂ ಮೆರವಣಿಗೆಯಲ್ಲಿ ಜನರು ಕಡಿಮೆ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಈ ಬಗ್ಗೆ ಪರ್ಯಾಯೋತ್ಸವ ಸಮಿತಿಯೊಂದಿಗೆ ಮತ್ತೊಂದು ಸುತ್ತಿನ ಸಭೆ ನಡೆಸಲಾಗುವುದು" ಎಂದಿದ್ದಾರೆ.
"ಕೊರೊನಾ ನಿಯಂತ್ರಣದಲ್ಲಿ ಸರಕಾರದ ಜೊತೆ ಸಾರ್ವಜನಿಕರ ಸಹಭಾಗಿತ್ವ ಬಹಳ ಮುಖ್ಯ. ಆ ನಿಟ್ಟಿನಲ್ಲಿ ಹೆಜ್ಜೆ ಇಡುತ್ತಿದ್ದೇವೆ. ಬೀಚ್ಗಳಲ್ಲಿ 7 ಗಂಟೆಯ ನಂತರ ಪ್ರವೇಶ ಕಡಿಮೆ ಮಾಡಬೇಕು. ಈ ಬಗ್ಗೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಹೆಚ್ಚು ಜನಸಂದಣಿ ಸೇರದಂತೆ ನಿಗಾ ವಹಿಸಬೇಕು" ಎಂದು ಹೇಳಿದ್ದಾರೆ.
"ಈಗ ಬೆಂಗಳೂರಿನಲ್ಲಿ ಮಾತ್ರ ಶಾಲೆ ಮುಚ್ಚಿವೆ. ಮುಂದೆ ಕೊರೊನಾ ತೀವ್ರತೆ ನೋಡಿಕೊಂಡು ಆಯಾ ಜಿಲ್ಲಾಡಳಿತಗಳಿಗೆ ತೀರ್ಮಾನ ತೆಗೆದುಕೊಳ್ಳಲು ರಾಜ್ಯ ಸರ್ಕಾರ ಸೂಚಿಸಿದೆ" ಎಂದಿದ್ದಾರೆ.