ಮಂಗಳೂರು, ಜ, 10 (DaijiworldNews/AN): ಕರಾವಳಿಯಲ್ಲಿ ಇಂದಿನಿಂದ ಕೋವಿಡ್ ಬೂಸ್ಟರ್ ಡೋಸ್ ನೀಡುವ ಕಾರ್ಯಕ್ಕೆ ಚಾಲನೆ ದೊರಕಿದೆ. ವೆನ್ಲಾಕ್ ನ ಆಯುಷ್ ವಿಭಾಗದಲ್ಲಿ ಜ.10ರ ಸೋಮವಾರ ಬಂದರು, ಮೀನುಗಾರಿಕೆ, ಒಳನಾಡು ಜಲ ಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ಅವರು ಮುನ್ನೆಚ್ಚರಿಕಾ ಡೋಸ್ ವಿತರಣೆಗೆ ಚಾಲನೆ ನೀಡಿದರು.
ಲಸಿಕೆ ಪಡೆದ ಅರ್ಹರಿಗೆ ಇದೇ ವೇಳೆ ಸಚಿವರು ಗುಲಾಬಿ ಹೂವು ನೀಡಿ ಅಭಿನಂದಿಸಿದರು.
ಬೂಸ್ಟರ್ ಡೋಸ್ ಲಸಿಕಾಕರಣದ ಅಂಗವಾಗಿ ಆರೋಗ್ಯ ಸಿಬ್ಬಂದಿ, ಕೋವಿಡ್ ಮುಂಚೂಣಿ ಕಾರ್ಯಕರ್ತರು ಹಾಗೂ 60 ವರ್ಷ ಮೇಲ್ಪಟ್ಟ ವೃದ್ದರು ಮುನ್ನೆಚರಿಕಾ ಡೋಸ್ ಲಸಿಕಾಕರಣದಲ್ಲಿ ಭಾಗಿಯಾಗಿ ಲಸಿಕೆಯನ್ನು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮಂಗಳೂರು ಮೇಯರ್ ಪ್ರೇಮಾನಂದ ಶೆಟ್ಟಿ, ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್ ಕುಮಾರ್ ಸೇರಿದಂತೆ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ದ.ಕ ಜಿಲ್ಲೆಯಲ್ಲಿ 3,37,447 ಫಲಾನುಭವಿಗಳಿಗೆ ಲಸಿಕೆ ನಿಡುವ ಗುರಿ ಇರಿಸಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ 52,523 ಆರೋಗ್ಯ ಕಾರ್ಯಕರ್ತರು ಹಾಗೂ 15,924 ಮುಂಚೂಣಿ ಕಾರ್ಯಕರ್ತರು ಹಾಗೂ 60 ವರ್ಷಕ್ಕಿಂತ ಮೇಲ್ಪಟ್ಟ 2,69,000 ಮಂದಿ ಫಲಾನುಭವಿಗಳಿದ್ದಾರೆ.