ಉಡುಪಿ, ಜ 09 (DaijiworldNews/HR): ಜನವರಿ 17 ಮತ್ತು 18ರಂದು 251ನೇ ಪರ್ಯಾಯ ಮಹೋತ್ಸವದ ಸಿದ್ದತೆಯ ಅಂಗವಾಗಿ ಉಡುಪಿ ನಗರವು ಈಗಾಗಲೇ ಸಿದ್ದಗೊಂಡು ನಿಂತಿದ್ದು, ರಸ್ತೆಗಳ ಡಾಮರೀಕರಣ ಕಾರ್ಯವು ಈಗಾಗಲೇ ಪ್ರಗತಿಯಲ್ಲಿದ್ದು, ನಗರವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ.
ಸೋಮವಾರ ಕೃಷ್ಣಾಪುರ ಮಠದ ವಿದ್ಯಾಸಾಗರತೀರ್ಥ ಸ್ವಾಮಿಗಳ ಪುರಪ್ರವೇಶ ನಡೆಯಲಿದ್ದು, ಕೋವಿಡ್ ನಿಯಮಾವಳಿಗಳ ಹಿನ್ನೆಲೆಯಲ್ಲಿ ಕೇವಲ ಸಾಂಪ್ರದಾಯಿಕ ಆಚರಣೆಗೆ ಪುರಪ್ರವೇಶ ಸೀಮಿತವಾಗಲಿದೆ.
ಸಂಪ್ರದಾಯ ದಂತೆ ಜೋಡುಕಟ್ಟೆಯಿಂದ ಸ್ವಾಮಿಗಳನ್ನು ತೆರೆದ ವಾಹನದಲ್ಲಿ ಶ್ರೀಕೃಷ್ಣಮಠಕ್ಕೆ ಗೌರವ ಪೂರ್ವಕವಾಗಿ ಕರೆತರಲಾಗುವುದು. ಈ ವೇಳೆ ವೈಭವದ ಮೆರವಣಿಗೆ ಆಯೋಜನೆಯಾಗಿತ್ತು ಆದರೆ ನಿಯಮಾವಳಿಗಳ ಹಿನ್ನೆಲೆಯಲ್ಲಿ ಕಲಾತಂಡಗಳು ಹಾಗೂ ಇತರ ಟ್ಯಾಬ್ಲೋ ಗಳನ್ನು ರದ್ದುಗೊಳಿಸಲಾಗಿದೆ. ಸ್ಥಳೀಯ ಗಣ್ಯರನ್ನು ಒಳಗೊಂಡಂತೆ 200 ಜನಕ್ಕೆ ಸೀಮಿತವಾಗಿ ಪುರಪ್ರವೇಶ ಮೆರವಣಿಗೆ ನಡೆಯಲಿದೆ.
ಇನ್ನು ನೈಟ್ ಕರ್ಪ್ಯೂ ಜಾರಿಯಾಗಿರುವ ಹಿನ್ನೆಲೆಯಲ್ಲಿ ರಾತ್ರಿ ಒಂಭತ್ತು ಗಂಟೆಗೆ ಮುಂಚಿತವಾಗಿ ರಥಬೀದಿಯಲ್ಲಿ, ಕೃಷ್ಣಾಪುರ ಶ್ರೀಗಳಿಗೆ ಪೌರಸಮ್ಮಾನ ಏರ್ಪಡಲಿದೆ. ಈ ವೇಳೆ ಯಾವುದೇ ಸಾರ್ವಜನಿಕರಿಂದ ಸನ್ಮಾನಕ್ಕೆ ಅವಕಾಶವಿಲ್ಲ. ಜನವರಿ 18ರಂದು ನಡೆಯಲಿರುವ ಪರ್ಯಾಯ ಮಹೋತ್ಸವವನ್ನು ಕೋವಿಡ್ ನಿಯಮಾವಳಿಗಳಿಗೆ ಅನುಸಾರವಾಗಿ ಮತ್ತು ಸಂಪ್ರದಾಯಕ್ಕೆ ಆದ್ಯತೆ ಕೊಟ್ಟು ನಡೆಸಲು ತೀರ್ಮಾನಿಸಲಾಗಿದೆ ಎಂದು ಶಾಸಕ ರಘುಪತಿ ಭಟ್ ಹೇಳಿದ್ದಾರೆ.