ಮಂಗಳೂರು, ಜ 09 (DaijiworldNews/HR): ಪ್ರಕೃತಿ ಮತ್ತು ಪರಿಸರವನ್ನು ಸಂರಕ್ಷಿಸುವ ಪರಿಸರ ಪ್ರವಾಸೋದ್ಯಮಕ್ಕೆ ಜಿಲ್ಲೆಯಲ್ಲಿ ಆದ್ಯತೆ ನೀಡಲಾಗುತ್ತಿದ್ದು, ಅದಕ್ಕಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಸಂಸದ ಕುಮಾರ್ ಕಟೀಲ್ ಹೇಳಿದ್ದಾರೆ.
ಈ ಬಗ್ಗೆ ತಣ್ಣೀರು ಬಾವಿಯಲ್ಲಿರುವ ಅರಣ್ಯ ಇಲಾಖೆಯಲ್ಲಿ ಜನಪ್ರತಿನಿಧಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಸಸಿಹಿತ್ಲು ಹಾಗೂ ತಣ್ಣೀರುಬಾವಿ ಕಡಲ ತೀರಗಳಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ, ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ವತಿಯಿಂದ ಪ್ರವಾಸಿಗರ ಅನುಕೂಲಕ್ಕೆ ಪ್ರಕೃತಿ ಮತ್ತು ಪರಿಸರಕ್ಕೆ ಅನುಕೂಲವಾಗುವ ರೀತಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ದಿ ಪಡಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಇನ್ನು ಮೂಲಭೂತ ಸೌಕರ್ಯಗಳು, ಸರ್ಫಿಂಗ್, ಪ್ರವಾಸಿಗರನ್ನು ಆಕರ್ಷಿಸುವ ಇತ್ಯಾದಿ ಚಟುವಟಿಕೆಗಳಿಗೆ ಕರಾವಳಿ ನಿಯಂತ್ರಣ ವಲಯದ ನಿಯಮಗಳು (ಸಿಆರ್ ಜ಼ಡ್) ಉಲ್ಲಂಘನೆಯಾಗದಂತೆ ಅಭಿವೃದ್ಧಿಗೆ ಕ್ರಮವಹಿಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ಭರತ್ ಶೆಟ್ಟಿ ಹಾಗೂ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ಜನಪ್ರತಿನಿಧಿಗಳು ಹಾಗೂ ಇಲಾಖೆಗಳ ಅಧಿಕಾರಿಗಳಿದ್ದರು.