ಮಂಗಳೂರು, ಜ, 09 (DaijiworldNews/AN): ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು, 60ವರ್ಷ ಮೇಲ್ಪಟ್ಟ ಹಾಗೂ ಅಸ್ವಸ್ಥತೆ ಇರುವ ನಾಗರಿಕರಿಗೆ ಕೊರೊನಾ ಮುನ್ನೆಚ್ಚರಿಕಾ ಕ್ರಮವಾಗಿ ಮುನ್ನೆಚ್ಚರಿಕಾ ಡೋಸ್ ಲಸಿಕೆ ಜನವರಿ 10 ರಿಂದ ಪ್ರಾರಂಭವಾಗಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, "ಈಗಾಗಲೇ ಎರಡು ಡೋಸ್ ಪಡೆದು 9 ತಿಂಗಳು ಮುಗಿಸಿರುವ ಫಲಾನುಭವಿಗಳು ಲಸಿಕೆಯನ್ನು ತೆಗೆದುಕೊಳ್ಳಲು ಅರ್ಹರಾಗಿದ್ದು, ಆನ್ಲೈನ್ ಮೂಲಕ ನೋಂದಾಯಿಸಿಕೊಂಡು ಅಥವಾ ನೇರವಾಗಿ ಲಸಿಕಾಕೇಂದ್ರಕ್ಕೆ ಬಂದು ಲಸಿಕೆಯನ್ನು ಪಡೆದುಕೊಳ್ಳಬಹುದು. ಇದಕ್ಕೆ ಹೊಸದಾಗಿ ನೊಂದಾವಣಿ ಮಾಡುವ ಅಗತ್ಯವಿರುವುದಿಲ್ಲ" ಎಂದು ಹೇಳಿದೆ.
ಇನ್ನು ಅರ್ಹ ಫಲಾನುಭವಿಗಳಿಗೆ ಈಗಾಗಲೇ ಪ್ರಥಮ ಹಾಗೂ ದ್ವಿತೀಯ ಡೋಸ್ಗೆ ನೊಂದಾಯಿಸಿದ ಮೊಬೈಲ್ ಸಂಖ್ಯೆಗೆ ಮೆಸೇಜ್ ಮೂಲಕ ಸಂದೇಶವನ್ನು ಕಳುಹಿಸಲಾಗುವುದು ಎಂದು ತಿಳಿಸಿದೆ.
ಜಿಲ್ಲೆಯಲ್ಲಿ ಒಟ್ಟು ಮುನ್ನೆಚ್ಚರಿಕಾ ಡೋಸ್ ಪಡೆಯಲು 337447 ಕಾರ್ಯಕರ್ತರಿದ್ದು, ಅದರಲ್ಲಿ 52523 ಆರೋಗ್ಯ ಕಾರ್ಯಕರ್ತರು, 15924 ಮುಂಚೂಣಿ ಕಾರ್ಯಕರ್ತರು, 269000 60ವರ್ಷ ಮೇಲ್ಪಟ್ಟವರನ್ನು ಗುರುತಿಸಲಾಗಿದೆ.