ಉಡುಪಿ, ಜ.09 (DaijiworldNews/PY): ಜಿಲ್ಲೆಯಲ್ಲಿನ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಹಾಗೂ 60 ವರ್ಷ ಮೇಲ್ಪಟ್ಟ ಸಹ ಅಸ್ವಸ್ಥತೆ ಹೊಂದಿರುವ ಫಲಾನುಭವಿಗಳಿಗೆ ಜನವರಿ 10 ರಿಂದ ಕೊರೊನಾ ಮುನ್ನೆಚ್ಚರಿಕಾ ಡೋಸ್ ನೀಡಲು ಎಲ್ಲಾ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಎಂದು ಜಿಲ್ಲಾಧಿಕಾರಿ ಕೂರ್ಮರಾವ್ ಎಂ. ತಿಳಿಸಿದರು.
ಅವರು ವರ್ಚುವಲ್ ಸಭೆಯ ಮೂಲಕ, ಕೊರೊನಾ ಮುನ್ನೆಚ್ಚರಿಕಾ ಡೋಸ್ ನೀಡಲು ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಅಗತ್ಯ ನಿರ್ದೇಶನಗಳನ್ನು ನೀಡಿದರು.
ಪ್ರಸ್ತುತ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಇದನ್ನು ನಿಯಂತ್ರಿಸಲು ಕಾರ್ಯನಿರ್ವಹಿಸುತ್ತಿರುವ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರಿಗೆ ಕೊರೊನಾ ತಗುಲದಂತೆ ಹೆಚ್ಚಿನ ರಕ್ಷಣೆ ನೀಡುವ ನಿಟ್ಟಿನಲ್ಲಿ ಮುನ್ನೆಚ್ಚರಿಕಾ ಡೋಸ್ ನೀಡಲು ಸರ್ಕಾರ ನಿರ್ಧರಿಸಿದ್ದು, ಕೊರೊನಾ ಮೊದಲ ಡೋಸ್ ಪಡೆದು 9 ತಿಂಗಳು ಪೂರೈಸಿದ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರು ತಪ್ಪದೇ ಈ ಲಸಿಕೆಯನ್ನು ಪಡೆಯುವಂತೆ ಜಿಲ್ಲಾಧಿಕಾರಿ ತಿಳಿಸಿದರು.
ಮುಂಚೂಣಿ ಕಾರ್ಯಕರ್ತರಾದ ಪೊಲೀಸ್ ಸಿಬ್ಬಂದಿ, ಕಂದಾಯ, ಗ್ರಾಮ ಪಂಚಾಯತ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಸಿಬ್ಬಂದಿಗಳಿಗೆ ಅವರು ಕಾರ್ಯ ನಿರ್ವಹಿಸುವ ಸ್ಥಳದಲ್ಲಿ ಲಸಿಕೆ ಪಡೆಯಲು ಅನುಕೂಲವಾಗುವಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಒಂದೊಂದು ಪ್ರತ್ಯೇಕ ಲಸಿಕಾ ಕೇಂದ್ರಗಳನ್ನು ತೆರೆಯುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಂದಾಯ ನೌಕರರಿಗೆ ಮತ್ತು ಚಂದು ಮೈದಾನದಲ್ಲಿ ಪೊಲೀಸ್ ಸಿಬ್ಬಂದಿಗೆ ವಿಶೇಷ ಲಸಿಕಾ ಕೇಂದ್ರ ತೆರೆಯುವಂತೆ ಹಾಗೂ ಜಿಲ್ಲೆಯ ಎಲ್ಲಾ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ಸಹ ಅವರಿಗೆ ಲಸಿಕೆ ಪಡೆಯುವಂತೆ ವ್ಯವಸ್ಥೆ ಮಾಡಿ, ಲಸಿಕಾ ಕೇಂದ್ರಗಳ ವಿವರಗಳನ್ನು ಸಾಕಷ್ಟು ಮುಂಚಿತವಾಗಿ ತಿಳಿಸುವಂತೆ ಹೇಳಿದರು.
ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರ ಕಾರ್ಯರ್ನಿಹಿಸುತ್ತಿರುವ ಇಲಾಖೆಯ ಅಧಿಕಾರಿಗಳು ತಮ್ಮ ಎಲ್ಲಾ ಸಿಬ್ಬಂದಿಗೆ ಕೊರೊನಾ ಮುನ್ನೆಚ್ಚರಿಕಾ ಡೋಸ್ ಪಡೆಯುವ ಬಗ್ಗೆ ಮಾಹಿತಿ ನೀಡಿ,ಅವರು ಲಸಿಕೆ ಪಡೆಯುವಂತೆ ಪ್ರೇರೆಪಿಸಬೇಕು, ಅವರು ತಮ್ಮ ಸಮೀಪದ ಅನುಕೂಲವಾದ ಸ್ಥಳದಲ್ಲಿ ಲಸಿಕೆ ಪಡೆಯುವಂತೆ ತಿಳಿಸಬೇಕು, ಒಂದು ವಾರದ ಅವಧಿಯೊಳಿಗೆ ಜಿಲ್ಲೆಯ ಎಲ್ಲಾ ಅರ್ಹ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರು ಸಂಪೂರ್ಣವಾಗಿ ಮುನ್ನೆಚ್ಚರಿಕಾ ಡೋಸ್ ಪಡೆಯುವಂತೆ ಗುರಿ ನಿಗದಿಪಡಿಸಿಕೊಂಡು ಅದರಂತೆ ಯೋಜನೆ ರೂಪಿಸಿ, ಕಾರ್ಯನಿರ್ವಹಿಸುವಂತೆ ತಿಳಿಸಿದರು.
ಜಿಲ್ಲೆಯಲ್ಲಿ ಕೊರೊನಾ ಸಮುಚಿತ ವರ್ತನೆಗಳಾದ ಮಾಸ್ಕ್ ಧರಿಸುವುದು ಮತ್ತು ಸಮಾಜಿಕ ಅಂತರ ಪಾಲನೆ ಕುರಿತಂತೆ ಅಧಿಕಾರಿಗಳು ಅತ್ಯಂತ ಕಟುನಿಟ್ಟಾಗಿ ಪರಿಶೀಲಿಸಬೇಕು, ಸಮುಚಿತ ವರ್ತನೆಗಳ ಪಾಲನೆಯನ್ನು ಉಲ್ಲಂಘಿಸಿದವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ದಂಡ ವಿಧಿಸುವಂತೆ ಸೂಚನೆ ನೀಡಿದ ಜಿಲ್ಲಾಧಿಕಾರಿಗಳು, ಜಿಲ್ಲೆಯ ಎಲ್ಲಾ ಪ್ರವಾಸಿ ತಾಣಗಳಲ್ಲಿ ಹೆಚ್ಚಿನ ತಪಾಸಣೆ ನಡೆಸುವಂತೆ ಸೂಚನೆ ನೀಡಿದರು. ಜಿಲ್ಲೆಯ ಎಲ್ಲಾ ಕಸ ವಿಲೆವಾರಿ ವಾಹನಗಳಲ್ಲಿ ಕೋವಿಡ್ ಸುರಕ್ಷಾ ಕ್ರಮಗಳ ಕುರಿತಂತೆ ಪ್ರತಿನಿತ್ಯ ಧ್ವನಿವರ್ಧಕದ ಮೂಲಕ ಜಾಗೃತಿ ಮೂಡಿಸುವಂತೆ ಹಾಗೂ ಎಲ್ಲಾ ಗ್ರಾಮೀಣ ಟಾಸ್ಕ್ ಪೋರ್ಸ್ಗಳು ಮತ್ತು ವಾರ್ಡ್ ಮಟ್ಟದ ಟಾಸ್ಕ್ ಪೋರ್ಸ್ಗಳು ತಮ್ಮ ವ್ಯಾಪ್ತಿಯಲ್ಲಿ ಸಭೆಗಳನ್ನು ನಡೆಸಿ, ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುವಂತೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್ , ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಡಿಹೆಚ್ಓ ಡಾ. ನಾಗಭೂಷಣ ಉಡುಪ, ಜಿಲ್ಲಾ ಕೊರೊನಾ ಲಸಿಕಾ ಉಸ್ತುವಾರಿ ಡಾ.ಎಂ.ಜಿ.ರಾಮ , ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿ ಡಾ.ಸತೀಶ್ಚಂದ್ರ ಹಾಗೂ ವಿವಿಧ ಜಿಲ್ಲಾ ಮತ್ತು ತಾಲೂಕುಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.