ಉಪ್ಪಿನಂಗಡಿ, ಜ.09 (DaijiworldNews/PY): ಮೀನು ಮಾರಾಟದ ಅಂಗಡಿಗೆ ದಾಳಿ ನಡೆಸಿ ತಲ್ವಾರಿನಿಂದ ಮೂವರನ್ನು ಕೊಲೆಗೈಯಲು ಯತ್ನಿಸಿ ಪರಾರಿಯಾಗಿದ್ದ ಆರೋಪಿಗಳ ಪೈಕಿ ಇಬ್ಬರನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಬಂಧಿತರನ್ನು ಬೆಳ್ತಂಗಡಿ ತಾಲೂಕು ತಣ್ಣೀರುಪಂತ ಗ್ರಾಮದ ಕುಪ್ಪೆಟ್ಟಿ ಬೈತಾರು ಮನೆ ನಿವಾಸಿ ಬಿ ದಾವೂದ್ ಅವರ ಪುತ್ರ ಸರ್ಪುದ್ದೀನ್ (31) ಹಾಗೂ ಕಡಬ ತಾಲೂಕು ಕೋಣಾಲು ಗ್ರಾಮದ ಕೋಲ್ಪೆ ಕೊಳಂಬೆ ಮನೆ ನಿವಾಸಿ ಮೂಸನ್ ಅವರ ಪುತ್ರ ಮೊಹಮ್ಮದ್ ಇರ್ಫಾನ್ (24) ಎಂದು ಗುರುತಿಸಲಾಗಿದೆ.
ಇಳಂತಿಲದ ಅಂಡೆತಡ್ಕದಲ್ಲಿ ಡಿ.5ರಂದು ವೈಯುಕ್ತಿಕ ದ್ವೇಷದ ಹಿನ್ನೆಲೆ ನಡೆದ ಹಲ್ಲೆ ಪ್ರಕರಣಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಆರೋಪಿಗಳು ಉಪ್ಪಿನಂಗಡಿಯ ಸುಬ್ರಹ್ಮಣ್ಯ ಕ್ರಾಸ್ ಬಳಿ ಇರುವ ಹಿಂದೂ ಸಮುದಾಯದ ಮೀನು ಮಾರಾಟ ಕೇಂದ್ರಕ್ಕೆ ದಾಳಿ ನಡೆಸಿದ್ದು, ಅಲ್ಲಿದ್ದ ಅಶೋಕ್ ಅಲಿಯಾಸ್ ಅನಿಲ್ ಕುಮಾರ್, ಅವರ ಅಣ್ಣ ಮೋಹನ್ ದಾಸ್ ಹಾಗೂ ಗ್ರಾಹಕನಾಗಿದ್ದ ಮಹೇಶ್ ಅವರಿಗೆ ತಲವಾರಿನಿಂದ ಹಲ್ಲೆ ಮಾಡಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ.14ರಂದು ಓರ್ವ ಆರೋಪಿಯನ್ನು ಹಾಗೂ ಕೃತ್ಯಕ್ಕೆ ಸಹಕರಿಸಿದ್ದ ಆರೋಪದಲ್ಲಿ ಪಿಎಫ್ಐ ಸಂಘಟನೆಯ ಮೂವರು ಪ್ರಮುಖರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡ ಹಿನ್ನೆಲೆ ಉಪ್ಪಿನಂಗಡಿಯಲ್ಲಿ ದಿನವಿಡೀ ಪ್ರತಿಭಟನೆ ನಡೆದು ರಾತ್ರಿ ಲಾಠಿಚಾರ್ಜ್ ನಡೆದಿತ್ತು. ನಂತರದ ದಿನಗಳಲ್ಲಿ ಹತ್ಯೆಯತ್ನ ಪ್ರಕರಣದ ತನಿಖೆ ಮಂದಗತಿಯಲ್ಲಿ ನಡೆದು, ಆರೋಪಿಗಳು ಬಂಧಿಸದಿರುವ ಬಗ್ಗೆ ಸಾರ್ವಜನಿಕರಿಂದ ಅಸಮಾಧಾನ ವ್ಯಕ್ತವಾಗಿತ್ತು.
ಮುಸುಕುಧಾರಿಗಳಾಗಿ ವಾಹನಗಳಲ್ಲಿ ಆಗಮಿಸಿ ಹತ್ಯೆಗೆ ಯತ್ನಿಸಿದ್ದ ಈ ಪ್ರಕರಣದಲ್ಲಿ ಆರೋಪಿಗಳ ಕುರಿತು ಯಾವುದೇ ಸುಳಿವು ಇರಲಿಲ್ಲ. ಆದರೆ, ನಂದಕುಮಾರ್ ಹಾಗೂ ಅವರ ತಂಡ ಸಿನಾನ್ ಎಂಬಾತನನ್ನು ಬಂಧಿಸಿ ಆತ ನೀಡಿದ ಮಾಹಿತಿಯ ಆಧಾರದಲ್ಲಿ ಇತರ 14 ಆರೋಪಿಗಳನ್ನು ಗುರುತಿಸಲಾಗಿತ್ತು.
ನಂತರ ನಡೆದ ಬೆಳವಣಿಗೆಯಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನದ ಜವಾಬ್ದಾರಿಯನ್ನು ಉಪ್ಪಿನಂಗಡಿ ಎಸ್ಐ ಕುಮಾರ್ ಕಾಂಬ್ಳೆ ಅವರಿಗೆ ನೀಡಲಾಗಿತ್ತು.