ಮಂಗಳೂರು, ಡಿ 05(MSP): ಹಲವು ಪ್ರಕರಣದಲ್ಲಿ ಭಾಗಿಯಾಗಿರುವ ಕೇರಳದ ಮಂಜೇಶ್ವರ ನಿವಾಸಿಯಾಗಿರುವ ಕುಖ್ಯಾತ ಪಾತಕಿ ತಲಕಿ ರಫೀಕ್ ಎಂಬಾತನ ಜೊತೆ ಮಂಗಳೂರು ನಗರ ಅಪರಾಧ ಘಟಕದ (ಸಿಸಿಬಿ) ಕಾನ್ಸ್ಟೆಬಲ್ ಚಂದ್ರ ಎಂಬುವವರು ನಿಕಟ ನಂಟು ಹೊಂದಿರುವ ಹಾಗೂ ಹಣಕಾಸಿನ ವಿಚಾರದಲ್ಲಿ ಮೊಬೈಲ್ ಮೂಲಕ ನಡೆಸಿರುವ ಮಾತುಕತೆಯ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಆಯುಕ್ತರು ತನಿಖೆಗೆ ಆದೇಶಿದ್ದಾರೆ.
ತಲಕಿ ರಫೀಕ್ ಮತ್ತು ಕಾನ್ಸ್ಟೆಬಲ್ ಚಂದ್ರ ನಡುವೆ ಮಲಯಾಳ ಭಾಷೆಯಲ್ಲಿ ನಡೆದಿರುವ ದೂರವಾಣಿ ಸಂಭಾಷಣೆಯ ಆಡಿಯೊ ತುಣುಕು ಇದಾಗಿದ್ದು, ಇದರಲ್ಲಿ
ಕೆಲವು ವ್ಯಕ್ತಿಗಳ ಮೊಬೈಲ್ ಲೊಕೇಷನ್ ಪತ್ತೆಹಚ್ಚಿರುವ ಮಾಹಿತಿ ನೀಡಿರುವುದಕ್ಕೆ ಪ್ರತಿಯಾಗಿ ಹಣ ನೀಡುವ ಕುರಿತು ಇಬ್ಬರ ನಡುವೆ ಡೀಲ್ ನಡೆದಿರುವುದು ಅದರಲ್ಲಿದೆ. ಚಂದ್ರ ನೀಡುತ್ತಿದ್ದ ಮಾಹಿತಿಯನ್ನು ಆಧಾರಿಸಿ ರಫೀಕ್ ದುಷ್ಕೃತ್ಯ ಎಸಗಲು ಬಳಸುತ್ತಿದ್ದ ಎನ್ನಲಾಗಿದೆ.
ತಲಕಿ ರಫೀಕ್ ವಿರುದ್ಧ 19 ಪ್ರಕರಣಗಳು ದಾಖಲಾಗಿವೆ. ಮಂಗಳೂರು ದಕ್ಷಿಣ ಉಪ ವಿಭಾಗದ ರೌಡಿ ನಿಗ್ರಹ ದಳ ಹಾಗೂ ಮಂಗಳೂರು ದಕ್ಷಿಣ ಠಾಣೆಯ ಪೊಲೀಸರು ಎರಡು ತಿಂಗಳ ಹಿಂದೆ ಈತನನ್ನು ಬಂಧಿಸಿದ್ದರು. ಆಗಿನಿಂದಲೂ ರಫೀಕ್ ನ್ಯಾಯಾಂಗ ಬಂಧನದಲ್ಲಿದ್ದಾನೆ.
ತನಿಖೆಗೆ ಆದೇಶ: ಸಿಸಿಬಿ ಪೊಲೀಸ್ ಒಬ್ಬರು ಆರೋಪಿ ತಲಕಿ ರಫೀಕ್ ಜತೆ ದೂರವಾಣಿ ಸಂಭಾಷಣೆಯ ವಿಚಾರ ನನ್ನ ಗಮನಕ್ಕೆ ಬಂದಿದೆ. ಇಬ್ಬರ ನಡುವಿನ ನಂಟು, ಯಾವ ಕಾರಣಕ್ಕಾಗಿ? ಯಾವಾಗ ಮಾತುಕತೆ ನಡೆಸಿದ್ದಾರೆ ? ಎಂಬುದನ್ನು ಪತ್ತೆ ಮಾಡಬೇಕಿದೆ. ಈ ಕುರಿತು ಇಲಾಖಾ ತನಿಖೆಗೆ ಆದೇಶಿಸಲಾಗುವುದು. ಕಾನ್ಸ್ಟೆಬಲ್ ತಪ್ಪೆಸಗಿರುವುದು ಸಾಬೀತಾದರೆ ಕಠಿಣ ಕ್ರಮ ಜರುಗಿಸಲಾಗುವುದು’ ಎಂದು ನಗರ ಪೊಲೀಸ್ ಕಮಿಷನರ್ ಟಿ.ಆರ್.ಸುರೇಶ್ ತಿಳಿಸಿದರು.