Karavali
ಕುಂದಾಪುರ: ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ ಬೆಳ್ಕಲ್ ತೀರ್ಥ
- Sat, Jan 08 2022 06:37:17 PM
-
ಕುಂದಾಪುರ, ಜ 08 (DaijiworldNews/PY): ಕೊಡಚಾದ್ರಿ ತಪ್ಪಲಿನಿಂದ ನೀರು ಧುಮ್ಮಿಕ್ಕುವ ಆ ದೃಶ್ಯ ದೂರದಿಂದಲೇ ಕೈಬೀಸಿ ಕರೆಯುತ್ತದೆ. ಸುಮಾರು 3 ಕಿ.ಮೀ ಕಾಲ್ನಡಿಗೆಯಲ್ಲಿಯೇ ಬೆಟ್ಟ ಏರಬೇಕು. ಒಂದಿಷ್ಟು ಕಷ್ಟದಿಂದ ಬೆಟ್ಟ ಏರಿ ಜಲಧಾರೆ ಬೀಳುವ ಸ್ಥಳಕ್ಕೆ ಬಂದರೆ ಅದೇನೋ ಧನ್ಯತಾಭಾವ. ಆ ಜಲಧಾರೆಯಡಿ ನಿಂತಾಗ ಮನಸ್ಸಿಗಾಗುವ ಆಹ್ಲಾದನೀಯ ಆನಂದ ಕಲ್ಪನೆಗೂ ನಿಲುಕದು.
ಬೈಂದೂರು ತಾಲೂಕು ಜಡ್ಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುದೂರಿನಿಂದ 8 ಕಿ.ಮೀ ದೂರದಲ್ಲಿ ಬೆಳ್ಕಲ್ ಇದೆ. ಬೆಳ್ಕಲ್ನ ಗೋವಿಂದ ದೇವಸ್ಥಾನದಿಂದ ಮೂರು ಕಿ.ಮಿ ಕಾಡುದಾರಿಯಲ್ಲಿ ಬೆಟ್ಟ ಏರುತ್ತ 3 ಕಿ.ಮೀ ಕ್ರಮಿಸಿದಾಗ ಸಿಗುತ್ತದೆ ಗೋವಿಂದ ತೀರ್ಥ. ಮುದೂರು ಪೇಟೆಯಲ್ಲಿ ನೋಡುವಾಗಲೇ ಭವ್ಯ ನೋಟ ಇನ್ನೇನು ಹತ್ತಿರದಲ್ಲೇ ಇದೆ ಎನ್ನುವ ಭಾವನೆ ಮೂಡಿಸುತ್ತದೆ. ಮೂಲ ಅರಸುತ್ತ ಹೋದಾಗಲೇ ನಡೆದಷ್ಟು ದೂರ ಭಾಸವಾಗುತ್ತದೆ. ಆದರೆ ಗೋವಿಂದ ತೀರ್ಥ ಎನ್ನುವ ಪ್ರೇಕ್ಷಣೀಯ, ಧಾರ್ಮಿಕ ಹಿನ್ನೆಲೆಯ ಈ ತಾಣ ಉಡುಪಿ ಜಿಲ್ಲೆಯ ಅದ್ಬುತವಾದ ಪ್ರವಾಸಿ ಸ್ಥಳ. ಇಂಥಹ ಅಪೂರ್ವವಾದ, ವಿಶಿಷ್ಠವಾದ ಜಲಪಾತ ಈ ಭಾಗದಲ್ಲಿ ಬೇರೆಲ್ಲೂ ಇಲ್ಲ. ದಟ್ಟ ಕಾಡು, ಜಲಧಾರೆ ಸಪ್ಪಳ ಬಿಟ್ಟರೆ ಮತ್ತೆಲ್ಲ್ಲ ನಿಶಬ್ದ. ಆಗಾಗ ಬೀಸುವ ಗಾಳಿಯ ಸದ್ದು, ಮರಗಳು ತಲೆದೂಗುವಾಗ ಆಗುವ ವಿಶಿಷ್ಠ ಶಬ್ದ, ತಂಗಾಳಿಯ ಹಿತಾನುಭವದ ನಡುವೆ ಚಾರಣ ದೇಹಕ್ಕಾಗುವ ಶ್ರಮವನ್ನು ದೂರ ಮಾಡುತ್ತದೆ.
ಬೆಟ್ಟದ ಬುಡಕ್ಕೆ ರಸ್ತೆ ಕೊನೆಯಾಗುತ್ತದೆ. ಅಲ್ಲಿಂದ ಕಾಲು ಹಾದಿ. ತುಸು ಮುಂದೆ ಕ್ರಮಿಸಿದಾಗ ಅರಣ್ಯ ಇಲಾಖೆಯ ಸಣ್ಣದೊಂದು ಕಛೇರಿ ಇದೆ. ಅಲ್ಲಿ ಮಾಹಿತಿ ನೀಡಿ ಪ್ರವಾಸಿಗರು ಮುಂದೆ ಕ್ರಮಿಸಬೇಕಾಗುತ್ತದೆ. ಎಳ್ಳಮಾವಾಸ್ಯೆ ಹೊರತು ಪಡಿಸಿ ಬೇರೆ ದಿನ ತಲಾ ಒಬ್ಬರಿಗೆ 100 ರೂ ಟಿಕೇಟ್ ಇರುತ್ತದೆ. ಇಲ್ಲಿಂದ ಒಂದು ಕಿ.ಮೀ. ತುಸು ಕಾಲುದಾರಿ ತಕ್ಕಮಟ್ಟಿಗೆ ಇದ್ದರೂ ಕೂಡಾ ಮುಂದೆ ಮುಂದೆ ಕ್ರಮಿಸುತ್ತ ಹೋದಂತೆ ಕಾಲುದಾರಿ ಕಠಿಣವಾಗುತ್ತ ಹೋಗುತ್ತದೆ. ಯಾವುದೇ ಮೂಲಸೌಕರ್ಯ, ಸುರಕ್ಷತೆ ಇಲ್ಲದಿರುವುದರಿಂದ ಜಾಗರೂಕವಾಗಿಯೇ ಹೆಜ್ಜೆ ಇಡಬೇಕಾಗುತ್ತದೆ. ಮುಂದೆ ಬೃಹದಾಕಾರದ ಮರದ ಬೇರುಗಳನ್ನು ಹತ್ತಿ ಇಳಿದು ಮುಂದುವರಿಯಬೇಕು. ಕೆಲವೆಡೆ ದಾರಿಗಡ್ಡವಾಗಿ ಉರುಳಿದ ಮರಗಳನ್ನು ದಾಟಿ ಮುಂದುವರಿಯಬೇಕು. ಕೆಲವೊಂದು ಕಡೆ ಬರೆಯ ಮಗ್ಗಲು ಭಯ ಬೀಳಿಸುತ್ತದೆ. ಇಕ್ಕಟ್ಟಾದ ದಾರಿಯಲ್ಲಿ ಗೋಡೆ ಏರಿದಂತೆ ಬೆಟ್ಟ ಮೇಲೇರಬೇಕು. ಹಿಡಿಕೆಗೆ ಬೀಳಲುಗಳೇ ಆಧಾರ. ಬಂಡೆಗಲ್ಲುಗಳ ಸಲೆಗಳು, ಬೇರು ಸಂದುಗಳ ನಡುವೆ ಕಾಲಿಟ್ಟು ಜೋಪಾನವಾಗಿ ಮೇಲೇರುತ್ತ ಹೋದಂತೆ ಇನ್ನೂ ಕಠಿಣವಾಗುತ್ತಾ ಹೋಗುತ್ತದೆ. ಮುಂದೆ ಇನ್ನೇನು ಒಂದು ಕಿ.ಮೀ ಇದೆ ಎನ್ನುವಾಗ ಜಲಧಾರೆಯ ಸಪ್ಪಳ ಕಿವಿಗೆ ಅಪ್ಪಳಿಸುತ್ತದೆ. ಆಗ ಉಮ್ಮಸ್ಸು ಯಾತ್ರಾರ್ಥಿಯಲ್ಲಿ ಇಮ್ಮುಡಿಸುತ್ತದೆ. ಗೋವಿಂದ ಗೋವಿಂದ ಎನ್ನುವ ಉದ್ಗಾರ ಕಿವಿಗಪ್ಪಳಿಸುತ್ತದೆ. ಇನ್ನೆನು ನಾವು ಗೌಮ್ಯಕ್ಕೆ ಬಂದೇವು ಎನ್ನುವಾಗ ದಾರಿ ಇನ್ನೂ ಕ್ಲಿಷ್ಟ ಎನಿಸುತ್ತದೆ.
ದೂರದಿಂದಲೇ ಮರಗಳ ನಡುವೆ ಬೆಳ್ಳನೆಯ ಜಲಧಾರೆ ಧರೆಗಿಳಿಯುವ ಕವಲುಗಳು ಕಾಣಿಸಿಕೊಂಡರು ಮೈಮನ ರೋಮಾಂಚನವಾಗುತ್ತದೆ. ಇನ್ನಷ್ಟು ಉತ್ಸಾಹದಿಂದ ಮೇಲೇರಿ ಜತನದಿಂದ ಹೆಜ್ಜೆ ಹಾಕುತ್ಥಾ ಬಂದಾಗಲೇ ನಾವು ಜಲಪಾತದ ತಳಕ್ಕೆ ಬಂದು ಬಿಡುತ್ತವೇ. ಆಗ ಕಾಲ್ನಡಿಗೆಯ ಶ್ರಮವೆಲ್ಲಾ ಮಾಯಾವಾಗಿ ಹೊಸ ಉತ್ಸಾಹ ಪುಟಿದೇಳುತ್ತದೆ. ಊಹನೆಗೂ ನಿಲುಕದ ಜಲಧಾರೆಯ ಸೊಬಗು, ಕಡಿದು, ಕಡೆದಂತೆ ಕಾಣುವ ಬಂಡೆಯಿಂದ ಪ್ರಕೃತಿ ನಿರ್ಮಿಸಿದ ಗೋಡೆಯೋ ಎಂಬಂತೆ ಭಾಸವಾಗುವ ಆ ಸೌಂದರ್ಯ, ಪವನಲೀಲೆಗೆ ತೇಲುತ್ತಾ ಕೆಳಗಿಳಿಯುವ ನೀರಧಾರೆ ನೋಡುತ್ತಾ ನಿಂತರೆ ರಮ್ಯಾದ್ಬುತ ಲೋಕಕ್ಕೆ ಕೊಂಡೋಯ್ಯುತ್ತದೆ. ಬಂಡೆಗಲ್ಲುಗಳ ಮೇಲೆ 500 ಅಡಿಗಿಂತಲೂ ಎತ್ತರದಿಂದ ಧುಮ್ಮಿಕ್ಕುವ ನೀರಿನ ರಭಸದಿಂದ ಬಂಡೆಗಳ ತೇಯ್ದು ನಾನಾ ರೂಪು ಪಡೆದಿವೆ. ತಳದಲ್ಲಿ ಬಂಡೆಗಲ್ಲು ಬಿಟ್ಟರೆ ಬೇರೆ ಯಾವುದೇ ಆಧಾರವಿಲ್ಲ. ಬಂಡೆಗಲ್ಲುಗಳನ್ನೇ ಹಿಡಿದುಕೊಂಡು ಬಲು ಜಾಗೃತೆಯಿಂದ ಜಲಪಾತದ ತೀರ್ಥಸ್ನಾನಕ್ಕೆ ಮುಂದಾಗಬೇಕು.
ಗೋವಿಂದ ತೀರ್ಥಕ್ಕೆ ಸಾಕಷ್ಟು ಪುರಾಣ ಹಿನ್ನೆಲೆಗಳು ಇವೆ. ದೈತ್ಯ ಕಂಹಾಸುರನ ಸಂಹಾರಿಸಿದ ಮೂಕಾಂಬಿಕೆ ತ್ರಿಶೂಲವನ್ನು ತೊಳೆದ ಸ್ಥಳವೇ ಈ ಗೋವಿಂದ ತೀರ್ಥ ಎನ್ನಲಾಗಿದೆ. ಇಲ್ಲಿ ವಿಶ್ವಂಭರ ಗಣಪತಿ, ಶ್ರೀ ಗೋವಿಂದ ಸ್ವಾಮಿ, ಕೋಟಿಲಿಂಗೇಶ್ವರ ಸಾನಿಧ್ಯವಿದ್ದು, ತೀರ್ಥಸ್ಥಳದ ಕೆಳಭಾಗದಲ್ಲಿ ದೇವಸ್ಥಾನವಿದೆ. ಹಾಗಾಗಿ ಬೆಳ್ಕಲ್ ತೀರ್ಥ ಧಾರ್ಮಿಕವಾಗಿ ಪ್ರಸಿದ್ಧವಾಗಿದೆ. ನವಂಬರ್, ಡಿಸೆಂಬರ್ ಚಾರಣಕ್ಕೆ ಸೂಕ್ತಕಾಲ. ಮಳೆಗಾಲದಲ್ಲಿ ಅಪಾಯ ಜಾಸ್ತಿ. ಹಾಗೂ ಇಂಬಳಗಳ ವಿಪರೀತ ಕಾಟ ಇರುತ್ತದೆ.
ಮೂಕಾಂಬಿಕಾ ರಕ್ಷಿತಾರಣ್ಯದ ನಡುವೆ ಇರುವ ಈ ಬೆಳ್ಕಲ್ ಪಾಲ್ಸ್ಗೆ ದೊಡ್ಡ ಪ್ರವಾಸಿ ಸ್ಥಳವಾಗಿ ಬೆಳೆಯುವ ಎಲ್ಲಾ ಆರ್ಹತೆ ಇದ್ದರೂ ಕೂಡಾ ಮೂಲಸೌಕರ್ಯದ ಕೊರತೆ ಹಾಗೂ ಅರಣ್ಯ ಇಲಾಖೆಯ ನಿಯಮಗಳಿಂದ ಪ್ರವಾಸಿಗರಿಂದ ದೂರವೇ ಉಳಿದಿದೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ಬೇರೆ ಬೇರೆ ಭಾಗದಿಂದ ಪ್ರವಾಸಿಗರು, ಭಕ್ತಾದಿಗಳು ಇಲ್ಲಿಗೆ ಬರುತ್ತಿದ್ದಾರೆ.
ಎಳ್ಳಮಾವಾಸ್ಯೆ ವಿಶೇಷ
ಇಲ್ಲಿ ಎಳ್ಳಮಾವಾಸ್ಯೆ ತೀರ್ಥಸ್ನಾನ ಬಲು ವಿಶೇಷ. ಸಾವಿರಾರು ಜನ ಭಕ್ತಾದಿಗಳು ಇಲ್ಲಿ ತೀರ್ಥಸ್ನಾನಕ್ಕೆ ಬರುತ್ತಾರೆ. ಇಲ್ಲಿ ಎಳ್ಳಮಾಸ್ಯೆಯಂದು ತೀರ್ಥಸ್ನಾನ ಮಾಡಿದರೆ ಪಾಪಗಳೆಲ್ಲವೂ ಪರಿಹಾರವಾಗಿ ಪುಣ್ಯಪ್ರಧವಾಗುತ್ತದೆ ಎನ್ನುವ ನಂಬಿಕೆ ದೃಢವಾಗಿ ಬೇರೂರಿದೆ.ಪ್ರಸಿದ್ಧ ತಾಣವಾಗಿ ಬೆಳೆಯುವ ಆರ್ಹತೆ
ಇದೊಂದು ಅತ್ಯಾದ್ಬುತ ನಿಸರ್ಗ ಭೂಸ್ವರ್ಗ. ಆದರೆ ಪ್ರವಾಸೋದ್ಯಮವಾಗಿ ಅಥವಾ ದಾರ್ಮಿಕ ಹಿನ್ನೆಲೆಯ ಮೂಲಕವಾದರೂ ಅಭಿವೃದ್ದಿ ಪಡಿಸಲು ಸಾಕಷ್ಟು ಅವಕಾಶಗಳು ಇವೆ. ಆದರೆ ಅದಿನ್ನೂ ಆಗಿಲ್ಲ. ಮೂಕಾಂಬಕಾ ರಕ್ಷಿತಾರಣ್ಯ ವ್ಯಾಪ್ತಿಗೆ ಒಳಪಟ್ಟಿರುವುದರಿಂದ ಅಭಿವೃದ್ದಿ ಕಾರ್ಯ ಮರೀಚಿಕೆ. ಸಂಬಂಧಪಟ್ಟವರು ದ್ರಢ ಮನಸ್ಸು ಮಾಡಿದರೆ ರಾಜ್ಯದ ಪ್ರಸಿದ್ದ ಪ್ರವಾಸಿ ತಾಣವಾಗಿ ರೂಪಿಸಬಹುದಾಗಿದೆ. ಎರಡು ಕಿ.ಮಿ ತನಕ ರಸ್ತೆ ನಿರ್ಮಾಣ ಮಾಡಿ, ಬಳಿಕ ಮೆಟ್ಟಿಲುಗಳ ನಿರ್ಮಿಸಿದರೆ ಸುಲಭವಾಗಿ ಹೋಗಬಹುದು. ಹಾಗೂ ಜಲಧಾರೆ ವೀಕ್ಷಿಸಲು ಪಥಗಳ ನಿರ್ಮಾಣ, ಕೆಳಗಡೆ ಭಾರೀ ಪ್ರಪಾತ ಇರುವುದರಿಂದ ಗಾರ್ಡ್ಗಳ ಅಳವಡಿಕೆ ಮಾಡಿದರೆ ಅನುಕೂಲವಾಗುತ್ತದೆ.ಮಹಿಳೆಯರು, ಮಕ್ಕಳು, ಪುರುಷರು ಬೇಧವಿಲ್ಲದೇ ತೀರ್ಥಸ್ನಾನ ಮಾಡಿ ಪುನೀತರಾಗುತ್ತದೆ. ಎಳ್ಳಮಾಸ್ಯೆಯಂದು ಬೆಟ್ಟ ಏರಲು ಸರದಿಯೇ ಏರ್ಪಡುತ್ತದೆ. ವರ್ಷದಿಂದ ವರ್ಷಕ್ಕೆ ಭಕ್ತಾದಿಗಳ ಸಂಖ್ಯೆಯೂ ಹೆಚ್ಚಳವಾಗಿದೆ. ಇಲ್ಲಿನ ಜಾತ್ರೆಯಾಗಿಯೂ ಆಚರಿಸಲಾಗುತ್ತದೆ. ಅಂದು ಕೆಳಗಡೆ ಗೋವಿಂದ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅನ್ನಸಂತರ್ಪಣೆ ಇರುತ್ತದೆ. ಬೆಟ್ಟದ ಮಧ್ಯದಲ್ಲಿ ದಣಿದವರಿಗೆ ಮಜ್ಜಿಗೆಯ ವ್ಯವಸ್ಥೆ ಉಚಿತವಾಗಿ ಮಾಡಲಾಗುತ್ತದೆ.