ಮಂಗಳೂರು, ಜ 08 (DaijiworldNews/PY): ರಾಜ್ಯಾದ್ಯಂತ ವಾರಾಂತ್ಯ ಕರ್ಫ್ಯೂ ಹಿನ್ನೆಲೆ ನಗರದಲ್ಲಿ ಪೊಲೀಸರಿಂದ ಬಿಗಿ ತಪಾಸಣೆ ನಡೆಯುತ್ತಿದ್ದು, ನಗರದಲ್ಲಿ ಅನಗತ್ಯ ಸಂಚಾರ ನಡೆಸಿದ 25ಕ್ಕೂ ಅಧಿಕ ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಡಿಸಿಪಿ ಹರಿರಾಂ ಶಂಕರ್ ಹೇಳಿದ್ದಾರೆ.
30ಕ್ಕೂ ಅಧಿಕ ಚೆಕ್ಪೋಸ್ಟ್ ಹಾಕಿ ತಪಾಸಣೆ ನಡೆಸಲಾಗುತ್ತಿದೆ. ಮುಂಜಾನೆ 6 ಗಂಟೆಯಿಂದಲೇ ಪೊಲೀಸ್ ಅಧಿಕಾರಿಗಳು ಅಗತ್ಯ ವಸ್ತುಗಳ ಅಂಗಡಿಗಳನ್ನು ಹೊರತುಪಡಿಸಿ ಉಳಿದೆಲ್ಲಾ ಅಂಗಡಿಗಳನ್ನು ಮುಚ್ಚಿಸುವ ಕಾರ್ಯವನ್ನು ಮಾಡುತ್ತಿದ್ದಾರೆ ಎಂದಿದ್ದಾರೆ.
ಇನ್ನು, ಈ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ 9 ಗಂಟೆಯವರೆಗೆ ಸಾರ್ವಜನಿಕರ ಯಾವುದೇ ವಾಹನಗಳಲ್ಲಿ ಜಪ್ತಿ ಮಾಡಿಲ್ಲ. 9 ಗಂಟೆಯ ಬಳಿಕ ಅನಗತ್ಯ ಸಂಚಾರ ನಡೆಸುವ ವಾಹನಗಳನ್ನು ಜಪ್ತಿ ಮಾಡಲಾಗಿದ್ದು, ನಗರದಲ್ಲಿ ಅನಗತ್ಯ ಸಂಚಾರ ನಡೆಸಿದ 25ಕ್ಕೂ ಅಧಿಕ ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಹೇಳಿದ್ದಾರೆ.
ಈ ಬಾರಿ ಸರ್ಕಾರ ನೀಡಿದ ಅದೇಶದಲ್ಲಿ ಅನೇಕ ಸಡಿಲಿಕೆ ನೀಡಲಾಗಿದ್ದು, ಅದರಂತೆ ಶೇ.99ರಷ್ಟು ಸಾರ್ವಜನಿಕರು ಸ್ಪಂದನೆ ನೀಡುತ್ತಿದ್ದಾರೆ. ಇನ್ನುಳಿದಂತೆ ಅನಗತ್ಯ ಸಂಚಾರ ವಾಹನಗಳ ಜಪ್ತಿ ಹಾಗೂ ತಪಾಸಣಾ ಕಾರ್ಯ ನಡೆಸಲಾಗುತ್ತಿದೆ ಎಂದಿದ್ದಾರೆ.
ಇನ್ನು ನಗರದಲ್ಲಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೂ ವೀಕೆಂಡ್ ಕರ್ಫ್ಯೂ ಬಿಸಿ ತಟ್ಟಿದ್ದು, ಬಸ್ಗಳಿದ್ದರೂ ಪ್ರಯಾಣಿಕರಿಲ್ಲದೇ ಬಸ್ ನಿಲ್ದಾಣ ಬಿಕೋ ಎನ್ನುತ್ತಿದೆ.
ಸದ್ಯ ಮಂಗಳೂರಿನಲ್ಲಿ ಶೇ.50 ಸರ್ಕಾರಿ ಬಸ್ಗಳಿಗಷ್ಟೇ ಓಡಾಟ ನಡೆಸುತ್ತಿದ್ದು, ಹೊರ ಜಿಲ್ಲೆ ಹಾಗೂ ದ.ಕ ಜಿಲ್ಲೆಯ ಒಳಗೆ ಬೆರಳೆಣಿಕೆ ಬಸ್ಗಳು ಸಂಚರಿಸುತ್ತಿವೆ.
ಈ ಬಗ್ಗೆ ಕೆಎಸ್ಆರ್ಟಿಸಿ ಡಿಸಿ ಅರುಣ್ ಕುಮಾರ್ ಹೇಳಿಕೆ ನೀಡಿದ್ದು, "ಪ್ರತಿದಿನ ಬೆಂಗಳೂರಿಗೆ 18 ಬಸ್ ಸಂಚರಿಸುತ್ತಿದ್ದು, ಇಂದು 9 ಬಸ್ ಮಾತ್ರ ಸಂಚರಿಸಿದೆ. ಎಲ್ಲಾ ಜಿಲ್ಲೆಗಳಿಗೂ ಬಸ್ ಇದ್ದರೂ ಪ್ರಯಾಣಿಕರ ಸಂಖ್ಯೆ ಇಲ್ಲ. ಬೆಂಗಳೂರು ಸೇರಿ ಹಲವೆಡೆ ಬುಕ್ಕಿಂಗ್ ಆಗಿದ್ದ ಟಿಕೆಟ್ ಕ್ಯಾನ್ಸಲ್ ಆಗಿದೆ. ತಮಿಳುನಾಡಿಗೂ ನಾವು ಬಸ್ ಸಂಚಾರ ಬಂದ್ ಮಾಡಿದ್ದೇವೆ. ಕಾಸರಗೋಡಿಗೆ ಶೇ.50 ಬಸ್ ಓಡಿಸಿದರೂ ಪ್ರಯಾಣಿಕರು ಇಲ್ಲ" ಎಂದಿದ್ದಾರೆ.