ಮಂಗಳೂರು,ಡಿ 08 (DaijiworldNews/MS): ಕೊರೊನಾ ಸೋಂಕು ಪ್ರಸರಣದ ಆತಂಕದ ಹಿನ್ನಲೆಯಲ್ಲಿ ಕರಾವಳಿ ಜಿಲ್ಲೆಯಲ್ಲಿ ವಾರಾಂತ್ಯ ಕರ್ಪ್ಯೂ ಶುಕ್ರವಾರ ರಾತ್ರಿ 10 ರಿಂದ ಆರಂಭವಾಗಿದ್ದು ಸೋಮವಾರ ಬೆಳಗ್ಗೆ 5ರವರೆಗೆ ಕರ್ಫ್ಯೂ ಮುಂದುವರಿಯಲಿದ್ದು, ಈ ಅವಧಿಯಲ್ಲಿ ಅಗತ್ಯ ಸೇವೆ ಹೊರತುಪಡಿಸಿ ಉಳಿದ ಎಲ್ಲ ಸೇವೆ, ವ್ಯವಹಾರಗಳು ಬಂದ್ ಆಗಲಿವೆ. ಸಾರ್ವಜನಿಕರು ಸಕಾರಣ ಇಲ್ಲದೆ ಮನೆಯಿಂದ ಹೊರಗೆ ಓಡಾಡದಂತೆ ಈಗಾಗಲೇ ಜಿಲ್ಲಾಡಳಿತ ಸೂಚನೆ ನೀಡಿದೆ.
ಕರ್ಫ್ಯೂ ಪರಿಣಾಮಕಾರಿ ಅನುಷ್ಠಾನಕ್ಕೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಕ್ರಮ ಕೈಗೊಂಡಿದೆ. ಈ ಹಿನ್ನಲೆಯಲ್ಲಿ ಶನಿವಾರ ಬೆಳಗ್ಗೆಯಿಂದಲೇ ಕ್ಲಾಕ್ ಟವರ್ ಬಳಿಯಲ್ಲಿ ಪೊಲೀಸರು ಅನಗತ್ಯವಾಗಿ ಸಂಚರಿಸುತ್ತಿದ್ದ ವಾಹನ ಸವಾರರಿಗೆ ಎಚ್ಚರಿಕೆ ನೀಡುತ್ತಿರುವ ಹಾಗೂ ಮಾಸ್ಕ ಧರಿಸದವರಿಂದ ದಂಡ ವಸೂಲು ಮಾಡುತ್ತಿರುವ ದೃಶ್ಯ ಕಂಡುಬಂತು. ಇದಲ್ಲದೆ ನಗರ ಪ್ರವೇಶಿಸುವ ಪ್ರಮುಖ ಸ್ಥಳಗಳು ಮತ್ತು ಆಯಕಟ್ಟಿನ ಪ್ರದೇಶಗಳಲ್ಲಿ ಪೊಲೀಸರು ರಸ್ತೆಗೆ ಬ್ಯಾರಿಕೇಡ್ ಅಳವಡಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ಇನ್ನು ನಗರದ ಬಹುತೇಕ ಎಲ್ಲಾ ದೇವಸ್ಥಾನಗಳಲ್ಲಿ ಕರ್ಫ್ಯೂ ಹಿನ್ನಲೆಯಲ್ಲಿ ಭಕ್ತರಿಗೆ ಪ್ರವೇಶ ನಿಷೇಧವಿದ್ದು, ಭಕ್ತರು ರಸ್ತೆಯಲ್ಲಿ ನಿಂತು ಪ್ರಾರ್ಥನೆ ಸಲ್ಲಿಸುತ್ತಿರುವುದು ಕಂಡುಬಂತು.
ವಾರಾಂತ್ಯ ಕರ್ಫ್ಯೂ ವೇಳೆ ದಿನಸಿ, ಹಾಲು, ತರಕಾರಿ, ಬೀದಿ ಬದಿ ವ್ಯಾಪಾರ, ಮಾಂಸ, ಮೀನು, ಔಷಧ, ಪತ್ರಿಕಾ ಅಂಗಡಿಗಳು ತೆರೆದಿರುತ್ತವೆ. ಜಿಲ್ಲಾಡಳಿತದ ಆದೇಶದಂತೆ ದ.ಕ. ಜಿಲ್ಲೆಯಲ್ಲಿ ಖಾಸಗಿ ಬಸ್ಗಳು ವಾರಾಂತ್ಯ ಕರ್ಫ್ಯೂ ವೇಳೆ ಸಂಚರಿಸಲಿವೆ. ಶನಿವಾರ ಶಾಲಾ ಕಾಲೇಜುಗಳಿಗೆ ರಜೆ ಇದ್ದು ಪರೀಕ್ಷೆಗೆ ಮಾತ್ರ ಅವಕಾಶ ನೀಡಲಾಗಿದೆ.