ಬಂಟ್ವಾಳ, ಜ 07 (DaijiworldNews/PY): "ಸೈದ್ಧಾಂತಿಕ ನೆಲೆಯಲ್ಲಿ ಪಕ್ಷ ಗಟ್ಟಿಗೊಳಿಸುವುದರ ಜೊತೆಗೆ ಬಲಿಷ್ಟ ಮತೀಯವಾದಿಗಳನ್ನು ಸೋಲಿಸಿ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಬಲಿಷ್ಟ ಜಾತ್ಯಾತೀತ ಕಾಂಗ್ರೆಸ್ಸಿಗರು ಒಟ್ಟಾಗಬೇಕು" ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಇಲ್ಲಿನ ಪಾಣೆಮಂಗಳೂರಿನಲ್ಲಿ ಶುಕ್ರವಾರ ಸಂಜೆ ಏರ್ಪಡಿಸಿದ್ದ ಕಾಂಗ್ರೆಸ್ ಅಲ್ಪಸಂಖ್ಯಾತರ ಸಮಾವೇಶ ಮತ್ತು ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
"ಸಬ್ ಕಾ ಸಾತ್, ಸಬ್ ಕಾ ವಿಕಾಸ್ ಕೇವಲ ಭಾಷಣಕ್ಕೆ ಸೀಮಿತಗೊಳಿಸದೆ ಕಾಂಗ್ರೆಸ್ ಇದನ್ನು ಅನುಷ್ಠಾನಗೊಳಿಸಿದ್ದು, ಕಾಂಗ್ರೆಸ್ ಮಾತ್ರ ಅಲ್ಪಸಂಖ್ಯಾತರ ನೈಜ ಆಪ್ತ ರಕ್ಷಕರು ಎಂದರು. ಈ ದೇಶದಲ್ಲಿ ಕಾಂಗ್ರೆಸ್ ಮುಕ್ತ ಭಾರತ ಎಂದಿಗೂ ಸಾಧ್ಯವಿಲ್ಲ. ಆದರೆ ಬಿಜೆಪಿ ಮುಕ್ತ ಭಾರತವಾಗಲಿದೆ" ಎಂದರು.
"ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಕೆ.ಕೆ.ಶಾಹುಲ್ ಹಮೀದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿಧಾನಪರಿಷತ್ ಸದಸ್ಯ ಹರೀಶ ಕುಮಾರ್ ಮಾತನಾಡಿ, ಪದೇ ಪದೇ ವೇಷ ಬದಲಿಸುವ ಬೂಟಾಟಿಕೆ ಪ್ರಧಾನಿಗೆ ಪಂಜಾಬ್ ರೈತರು ತಕ್ಕ ಪಾಠ ಕಲಿಸಿದ್ದಾರೆ" ಎಂದರು.
ಎಐಸಿಸಿ ಕಾರ್ಯದರ್ಶಿ ಪಿ.ವಿ.ಮೋಹನ್, ಐವನ್ ಡಿಸೋಜ, ಕಾಂಗ್ರೆಸ್ ವಕ್ತಾರೆ ಸುರಯಾ ಅಂಜುಮಾನ್ ಮಾತನಾಡಿದರು.
ಕೇರಳ ಕಲ್ಪೆಟ್ಟ ಶಾಸಕ ವಕೀಲ ಟಿ.ಸಿದ್ದೀಕ್ ಮಾತನಾಡಿ, "ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಕಾಂಗ್ರೆಸ್ ನೀಡಿದ ದಕ್ಷ ಆಡಳಿತದಿಂದ ದೇಶ ಬಲಿಷ್ಟವಾಗಿ ಬೆಳೆದಿದೆ. ದೇಶಕ್ಕೆ ಕಾಂಗ್ರೆಸ್ ಏನು ಕೊಟ್ಟಿದೆ ಎಂದು ಪ್ರಶ್ನಿಸುವ ಬಿಜೆಪಿ ದೇಶಕ್ಕೆ ಶಾಪವಾಗಿ ತಟ್ಟಿದೆ. ಎಲ್ಲಾ ಜಾತಿ , ಧರ್ಮ, ಪ್ರಾಂತ್ಯ ಒಟ್ಟುಗೂಡಿಸಿ ಕಾಂಗ್ರೆಸ್ ರಚಿಸಿದ ಸೌಹಾರ್ದಯುತ ಭಾರತವನ್ನು ಮತ್ತೆ ಎತ್ತರಕ್ಕೆ ಬೆಳೆಸಲು ಕಾಂಗ್ರೆಸ್ ಮತ ವಿಭಜನೆಯಾಗದಂತೆ ಎಚ್ಚರವಹಿಸಬೇಕು" ಎಂದರು.
ನಿವೃತ್ತ ಪೊಲೀಸ್ ಅಧಿಕಾರಿ ಜಿ.ಎ.ಬಾವಾ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಬಿ.ಪದ್ಮಶೇಖರ ಜೈನ್, ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ಸದಸ್ಯ ಪಿಯೂಸ್ ಎಲ್.ರೋಡ್ರಿಗಸ್, ಗೇರು ಅಭಿವೃದ್ಧಿ ನಿಗಮ ಮಾಜಿ ಅಧ್ಯಕ್ಷ ಬಿ. ಎಚ್. ಖಾದರ್, ರಾಜ್ಯ ಯುವ ಕಾಂಗ್ರೆಸ್ ಮುಖಂಡ ಮೆರಿಲ್ ರೇಗೋ, ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಯುವ ಕಾಂಗ್ರೆಸ್ ಅಧ್ಯಕ್ಷ ಸುರೇಶ ಪೂಜಾರಿ ಜೋರ, ನವಾಝ್ ಬಡಕಬೈಲು, ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್, ಉಪಾಧ್ಯಕ್ಷೆ ಜೆಸಿಂತಾ ಡಿಸೋಜ, ಮಾಜಿ ಅಧ್ಯಕ್ಷೆ ಜೋಸ್ಪಿನ್ ಡಿಸೋಜ, ಪ್ರಮುಖ ಸುದರ್ಶನ್ ಜೈನ್, ಮಹಮ್ಮದ್ ನಂದರಬೆಟ್ಟು, ಆಲ್ಬರ್ಟ್ ಮಿನೇಜಸ್, ಬಿ.ಎಂ.ಅಬ್ಬಾಸ್ ಅಲಿ, ಪಿ.ಎಸ್. ಅಬ್ದುಲ್ ಹಮೀದ್, ಮುಹಮ್ಮದ್ ಹನೀಫ್ ಗೋಳ್ತಮಜಲು, ಇಸ್ಮಾಯಿಲ್ ಸಿದ್ದೀಕ್ ಕಾವಳಕಟ್ಟೆ ಮತ್ತಿತರರು ಇದ್ದರು.
ಇದೇ ನೂತನ ಅಧ್ಯಕ್ಷರ ಪದಗ್ರಹಣ ಮತ್ತು ವೇಳೆ ವಿಟ್ಲ ಪಟ್ಟಣ ಪಂಚಾಯಿತಿ ನೂತನ ಸದಸ್ಯರನ್ನು ಅಭಿನಂದಿಸಲಾಯಿತು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ಎಸ್.ಮಹಮ್ಮದ್ ಸ್ವಾಗತಿಸಿ, ವಕೀಲ ರಿಯಾಝ್ ಬಂಟ್ವಾಳ ವಂದಿಸಿದರು. ಅಬ್ದುಲ್ ಹಮೀದ್ ಗೋಳ್ತಮಜಲು ನಿರೂಪಿಸಿದರು.