ಕುಂದಾಪುರ, ನ 04(SM): ವ್ಯಕ್ತಿಯೋರ್ವರ ಮೃತದೇಹ ಮಸೀದಿಯೊಂದರ ಶೌಚಾಯದಲ್ಲಿ ಪತ್ತೆಯಾದ ಘಟನೆ ಗಂಗೊಳ್ಳಿಯಲ್ಲಿ ಮಂಗಳವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. ಕುಂದಾಪುರದ ಕೋಣಿಯ ನಿವಾಸಿ ಸುರೇಶ್ ಮೊಗವೀರ(35) ಎಂಬಾತ ಮೃತ ವ್ಯಕ್ತಿ. ಸುರೇಶ್ ಮೊಗವೀರ ಮೃತದೇಹವು ಗಂಗೊಳ್ಳಿಯ ಮಸೀದಿಯ ಟಾಯ್ಲೆಟ್ನಲ್ಲಿ ಅಡ್ಡಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಹತ್ತು ವರ್ಷಗಳ ಹಿಂದೆ ಸುರೇಶ್ ಮೊಗವೀರ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದರು ಎನ್ನಲಾಗಿದೆ. ಇದರಿಂದ ಆತನ ಮನೆಯಲ್ಲಿ ಗಲಾಟೆಯೂ ನಡೆದಿತ್ತು. ಇದರಿಂದಾಗಿ ಸುರೇಶ್ ಮೊಗವೀರ ಮನೆಯಿಂದ ಹೊರಬಂದಿದ್ದರು. ನಂತರ ಗಂಗೊಳ್ಳಿಯ ಬಾಬಷಾ ಮೊಹಲ್ಲಾದ ಪರಿಸರದಲ್ಲಿ ಕೂಲಿ ಕೆಲಸ, ವಾಹನ ತೊಳೆಯುವುದು, ಪೈಂಟಿಂಗ್ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ಎನ್ನಲಾಗಿದೆ.
ವಿಪರೀತ ಕುಡಿತದ ಚಟ ಹೊಂದಿದ್ದ ಸುರೇಶ್ ಮೊಗವೀರ 3-4 ದಿನದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಎನ್ನಲಾಗಿದೆ. ಆದರೆ ಅನಾರೋಗ್ಯದಲ್ಲಿಯೂ ಕುಡಿಯುವುದನ್ನು ನಿಲ್ಲಿಸಿರಲಿಲ್ಲ ಎಂದು ತಿಳಿದು ಬಂದಿದೆ. ಸೋಮವಾರ ರಾತ್ರಿ ಕುಡಿತದ ಅಮಲಿನಲ್ಲಿದ್ದ ಸುರೇಶ್ ಮಲ ಮೂತ್ರ ವಿಸರ್ಜನೆಗೆ ತೆರಳಿದ ಸಂದರ್ಭ ಕುಸುದು ಬಿದ್ದು ಮೃತಪಟ್ಟಿರಬಹುದೆಂದು ಅಂದಾಜಿಸಲಾಗಿದೆ.
ಗಂಗೊಳ್ಳಿ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.