ವಿಟ್ಲ, ಜ 07 (DaijiworldNews/PY): ಮದುಮಗನಿಂದ ಹಿಂದೂಗಳ ಆರಾಧ್ಯ ದೈವ ಕೊರಗಜ್ಜನಿಗೆ ಅಪಮಾನ ಆರೋಪಕ್ಕೆ ಸಂಬಂಧಿಸಿದಂತೆ ಮದುಮಗಳ ಮನೆಗೆ ವಿಹೆಚ್ಪಿ, ಬಜರಂಗದಳದ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದ್ದಾರೆ.
ವಿಟ್ಲದ ಸಾಲೆತ್ತೂರಿನಲ್ಲಿರುವ ಮದುಮಗಳ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ ವಿಟ್ಲ ಪ್ರಖಂಡ ವಿಹೆಚ್ಪಿ, ಬಜರಂಗದಳದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
ಮಂಜೇಶ್ವರ ತಾಲೂಕಿನ ಉಪ್ಪಳದ ಯುವಕನೊಂದಿಗೆ ನಿಕಾಹ್ ಮಧ್ಯಾಹ್ನ ವೇಳೆಗೆ ನಡೆದಿದ್ದು, ಸಂಜೆ ವೇಳೆ ಔತಣಕೂಟವನ್ನು ಏರ್ಪಡಿಸಿದ್ದರು. ಔತಣಕೂಟಕ್ಕೆ ತಡರಾತ್ರಿ ಆಗಮಿಸಿದ ವರನ ಬಳಗ ವಧುವಿನ ಮನೆ ಮುಂದಿನ ರಸ್ತೆಯಲ್ಲಿ ಹಾಡು ಹೇಳಿ ಕುಣಿಯುತ್ತಾ ಬಂದಿದ್ದಾರೆ. ಈ ಸಂದರ್ಭ ಕೊರಗಜ್ಜ ದೈವದ ವೇಷ-ಭೂಷಣ ಧರಿಸಿ ವರ ಆಗಮಿಸಿದ್ದರು.
ವಿವಾಹ ಸಮಾರಂಭದಲ್ಲಿ ಮದುಮಗನಿಗೆ ಕೊರಗಜ್ಜನ ರೀತಿಯ ವೇಷ-ಭೂಷಣ ಹಾಕಿ ಕುಣಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆಯನ್ನುಂಟು ಮಾಡುವಂತಿದೆ ಎನ್ನುವ ಆರೋಪ ಕೇಳಿಬಂದಿತ್ತು.