ವಿಟ್ಲ, ಜ 07 (DaijiworldNews/PY): ವಿವಾಹ ಸಮಾರಂಭದಲ್ಲಿ ಮದುಮಗನಿಗೆ ಕೊರಗಜ್ಜನ ರೀತಿಯ ವೇಷ-ಭೂಷಣ ಹಾಕಿ ಕುಣಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆಯನ್ನುಂಟು ಮಾಡುವಂತಿದೆ ಎನ್ನುವ ಆರೋಪ ಕೇಳಿಬಂದಿದೆ.
ಕೊಳ್ನಾಡು ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಮಂಜೇಶ್ವರ ತಾಲೂಕಿನ ಉಪ್ಪಳದ ಯುವಕನೊಂದಿಗೆ ನಿಕಾಹ್ ಮಧ್ಯಾಹ್ನ ವೇಳೆಗೆ ನಡೆದಿದ್ದು, ಸಂಜೆ ವೇಳೆ ಔತಣಕೂಟವನ್ನು ಏರ್ಪಡಿಸಿದ್ದರು. ಔತಣಕೂಟಕ್ಕೆ ತಡರಾತ್ರಿ ಆಗಮಿಸಿದ ವರನ ಬಳಗ ವಧುವಿನ ಮನೆ ಮುಂದಿನ ರಸ್ತೆಯಲ್ಲಿ ಹಾಡು ಹೇಳಿ ಕುಣಿಯುತ್ತಾ ಬಂದಿದ್ದಾರೆ. ಈ ಸಂದರ್ಭ ಕೊರಗಜ್ಜ ದೈವದ ವೇಷ-ಭೂಷಣ ಧರಿಸಿ ವರ ಆಗಮಿಸಿದ್ದಾರೆ ಎನ್ನಲಾಗಿದೆ.
ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಹಿಂದೂಗಳ ಭಾವನೆಗೆ ಧಕ್ಕೆಯನ್ನುಂಟು ಮಾಡುತ್ತಿದೆ. ಅಲ್ಲದೇ, ಕೊರಗ ಸಮುದಾಯವನ್ನು ಅವಮಾನಿಸಿದ್ದಾರೆ ಎಂದು ಸ್ವತಃ ಮುಸ್ಲಿಂ ಸಮುದಾಯದವರೇ ಟೀಕಿಸಿದ್ದಲ್ಲದೇ, ವರ ಹಾಗೂ ಆತನ ಸಂಗಡಿಗರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವ ಮೂಲಕ ಸಮಾಜದ ಶಾಂತಿ ಸುವ್ಯವಸ್ಥೆ ಕಾಪಾಡಬೇಕು ಎನ್ನುವ ಆಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಈ ಕೃತ್ಯವೆಸಗಿದವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ದ.ಕ ಜಿಲ್ಲಾ ದಲಿತ್ ಸೇವಾ ಸಮಿತಿ ಸ್ಥಾಪಕಾಧ್ಯಕ್ಷ ಸೇಸಪ್ಪ ಬೆದ್ರಕಾಡು ಅವರು, ಘಟನೆ ನಡೆದಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬಂದ ವೀಡಿಯೋ ಕಂಡು ಗೊತ್ತಾಗಿದೆ. ಈ ಬಗ್ಗೆ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ. ಪೊಲೀಸ್ ಇಲಾಖೆಗೂ ಮಾಹಿತಿ ನೀಡಿದ್ದೇನೆ ಎಂದರು.
ಶಾಸಕ ರಾಜೇಶ್ ನಾಯ್ಕ್ ಖಂಡನೆ
ವಿಟ್ಲ ಠಾಣಾ ವ್ಯಾಪ್ತಿಯ ಕೊಳ್ನಾಡು ಗ್ರಾಮದಲ್ಲಿ ಮದುವೆ ಸಮಾರಂಭದಲ್ಲಿ ಕೊರಗಜ್ಜ ದೈವದ ವೇಷಭೂಷಣ ತೊಟ್ಟು ಅವಹೇಳನಗೈದ ಘಟನೆಯನ್ನು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ತೀವ್ರವಾಗಿ ಖಂಡಿಸಿದ್ದು, ತುಳುನಾಡಿನ ದೈವಾರಾಧನೆಯ ಬಗ್ಗೆ ವಿಕೃತಿಯನ್ನು ಮೆರೆದವರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಶಾಸಕರು ಪೋಲಿಸ್ ಇಲಾಖೆಗೆ ಸೂಚಿಸಿದ್ದಾರೆ.
ಠಾಣೆಗೆ ದೂರು ಬಂದಿಲ್ಲ.!
ಈ ಬಗ್ಗೆ ಯಾವುದೇ ದೂರುಗಳು ಬಂದಿಲ್ಲ ಎಂದು ವಿಟ್ಲ ಠಾಣಾ ಪೊಲೀಸರು ಪ್ರತಿಕ್ರಿಯಿಸಿದ್ದಾರೆ.