ಉಡುಪಿ, ಜ 07 (DaijiworldNews/AN): ಸರಕಾರದ ಮಾರ್ಗಸೂಚಿಯನ್ನು ಪಾಲಿಸಿಕೊಂಡು, ಸಭಾಭವನಗಳಲ್ಲಿ ಮದುವೆ ಅಥವಾ ಇತರ ಕಾರ್ಯಕ್ರಮಗಳನ್ನು ನಡೆಸಲು ಅವಕಾಶ ಕೊಡಬೇಕು. ಥಿಯೇಟರ್ ಗಳಲ್ಲಿ ಶೇ.50ರಷ್ಟು ವ್ಯವಹಾರಕ್ಕೆ ಅವಕಾಶ ಕೊಡುವ ಸರಕಾರ ಸಭಾಭವನದಲ್ಲಿ ನಡೆಸಲು ಯಾಕೆ ಅನುಮತಿ ನೀಡುತ್ತಿಲ್ಲ? ಸಭಾಭವನ ನಡೆಸಲು ಅವಕಾಶ ಕೊಡದಿದ್ದರೆ ಬೀದಿಗಿಳಿದು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಉಡುಪಿ ಜಿಲ್ಲಾ ಸಭಾಭವನಗಳ ಒಕ್ಕೂಟದ ಸಲಹೆಗಾರ ಭರತ್ ಕುಮಾರ್ ಶೆಟ್ಟಿ ಎಚ್ಚರಿಕೆ ನೀಡಿದರು.
ಅವರು ಇಂದು ಉಡುಪಿ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, "ಸಭಾಭವನದ ಕಾರ್ಯಕ್ರಮಗಳಿಗೆ ಹೊಂದಿಕೊಂಡು ಕಾರ್ಯನಿರ್ವಹಿಸುತ್ತಿರುವ ಲಕ್ಷಾಂತರ ಜನ ಅಸಂಘಟಿತ ಮತ್ತು ಅವಿದ್ಯಾವಂತ ಬಡಕುಟುಂಬಗಳು ಆರ್ಥಿಕ ಸಂಕಷ್ಟದಿಂದ ಕಂಗಾಲಾಗಿದ್ದೇವೆ. ಇನ್ನೇನು ಕಾರ್ಯಕ್ರಮಗಳು ಪೂರ್ಣ ಪ್ರಮಾಣದಲ್ಲಿ ಪ್ರಾರಂಭವಾಗುವ ಹಂತದಲ್ಲಿ 3ನೇ ಆಲೆಯ ಸೂಚನೆಯ ಮೇರೆಗೆ ಸಭಾಂಗಣದಲ್ಲಿ ಮಾಡುವ ಕಾರ್ಯಕ್ರಮಗಳಲ್ಲಿ ಸಂಪೂರ್ಣ ಅವೈಜ್ಞಾನಿಕವಾಗಿ 100 ರಿಂದ 200 ಜನರ ಒಗ್ಗೂಡುವಿಕೆಯ ಅನುಮತಿಯ ನಿರ್ಧಾರವನ್ನು ಸರ್ಕಾರ ಕೈಗೆತ್ತಿಕೊಂಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಅಲ್ಲದೇ ಸಿನಿಮಾ ಮಂದಿರ ಪಾರ್ಕ ಜಿಮ್ ಸೆಂಟರ್ಗಳಲ್ಲಿ ಶೇ.50ರಷ್ಟು ಅನುಮತಿಯನ್ನು ನೀಡಿದ್ದು, ಸಭಾಭವನಗಳಿಗೆ ಈ ಅವಕಾಶಗಳಿಂದ ವಂಚಿತರನ್ನಾಗಿಸಿ ಮಲತಾಯಿ ಧೋರಣೆಯನ್ನು ಮಾಡಿರುವುದು ವಿಷಾದನೀಯ, ಸರ್ಕಾರಕ್ಕೆ ಕೊಟ್ಯಾಂತರ ರೂಪಾಯಿ ತೆರಿಗೆ ನಷ್ಟ ಆಗಲಿದೆ ಎಂದು ಹೇಳಿದರು.
ಈಗಾಗಲೇ ನಿಗದಿಯಾದ ಕಾರ್ಯಕ್ರಮಗಳಿಗೆ ಆಮಂತ್ರಣ ಪತ್ರಿಕೆಗಳು ತಲುಪಿದ್ದು, ಕಾರ್ಯಕ್ರಮಕ್ಕೆ ಬರುವವರಿಗೆ ಆಮಂತ್ರಣ ಪತ್ರಿಕೆಯನ್ನು ಪಾಸ್ ರೀತಿಯಲ್ಲಿ ಬಳಸಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು.
ಒಕ್ಕೂಟದ ಅಧ್ಯಕ್ಷರಾದ ಶೇಡಿಕೊಡ್ಲು ವಿಠ್ಠಲ ಶೆಟ್ಟಿ, ಮಾತನಾಡಿ, "ಬೇರೆ ಎಲ್ಲಾ ವ್ಯಾಪಾರ ವಹಿವಾಟುಗಳಿಗೆ ನಿಗದಿಪಡಿಸಿದಂತೆ 50:50 ಅನುಪಾತದಲ್ಲಿ ಸಭಾಂಗಣದ ಆಸನಗಳ ಶೇ.50ರಷ್ಟು ಜನರ ಕೂಡುವಿಕೆಗೆ ಅವಕಾಶ ಕಲ್ಪಿಸಬೇಕೆಂದು ಸರ್ಕಾರವನ್ನು ಕೇಳಿಕೊಳ್ಳುವ ನಿರ್ಣಯ. ಮದುವೆ ಸಮಾರಂಭಗಳ ಜೊತೆಗೆ ಅದಕ್ಕೆ ಸಂಬಂಧಿಸಿದ ಇತರೇ, ಕೌಟುಂಬಿಕ ಕಾರ್ಯಕ್ರಮಗಳನ್ನು ನಡೆಸುವರೇ ಅನುಮತಿಯನ್ನು ನೀಡಬೇಕು. ತಜ್ಞರು ಈ ಬಗ್ಗೆ ಹೆಚ್ಚು ಗಂಭೀರವಾಗಿ ಆಲೋಚನೆ ಮಾಡಿದಂತಿಲ್ಲ" ಎಂದರು.
ಸರಕಾರದ ಆದೇಶದಂತೆ ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ಕಾರ್ಯಕ್ರಮಗಳನ್ನು ನಡೆಸುವರೇ ಬದ್ಧರಾಗಿರುತ್ತೇವೆ. ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ನಮ್ಮ ಜಿಲ್ಲೆಯ ಎಲ್ಲಾ ಶಾಸಕರು ಮತ್ತು ಉಸ್ತುವಾರಿ ಮಂತ್ರಿಗಳ ಸಹಕಾರದೊಂದಿಗೆ ಮಾನ್ಯ ಮುಖ್ಯ ಮಂತ್ರಿಗಳಿಗೆ ಈ ಕುರಿತು ಮನವಿ ಸಲ್ಲಿಸಲಾಗುವುದು ಎಂದರು.
ಪತ್ರಿಕಾಗೋಷ್ಟಿಯಲ್ಲಿ ಉಡುಪಿ ಜಿಲ್ಲಾ ಸಭಾಭವನಗಳ ಒಕ್ಕೂಟದ ಉಪಾಧ್ಯಕ್ಷ ಜಯರಾಜ್ ಹೆಗ್ಡೆ, ಖಜಾಂಚಿ ರಂಜನ್ ಕಲ್ಕೂರ್, ಸಿಟಿ ಸೆಂಟರ್ನ ಮಾಲಕ ಚಂದ್ರಶೇಖರ್ ಶೆಟ್ಟಿ, ಎರ್ಮಾಳು ಶಶಿಧರ್ ಶೆಟ್ಟಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.