ಮಣಿಪಾಲ, ಡಿ 07 (DaijiworldNews/MS): ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್ ಕಸಿದು ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ಎಗರಿಸಿದ ಘಟನೆ ಉಡುಪಿ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊದಿಯಮ್ಮ ಡೆನಿಲ್ ಎಂಬವರು ತನ್ನ ಗಂಡ ಹಾಗೂ ಮಗನೊಂದಿಗೆ ಕುರ್ಲಾ ಕಯಾಕುಲಂ ನೇತ್ರಾವತಿ ಎಕ್ಸ್ ಪ್ರೆಸ್ ರೈಲಿನಲ್ಲಿ ಡಿ.15ರಂದು ಕಣ್ಣೂರಿ ನಿಂದ ಕಯಾಕುಲಂಗೆ ಪ್ರಯಾಣಿಸುತ್ತಿದ್ದರು. ಡಿ.16ರಂದು ಮುಂಜಾನೆ ರೈಲು ಉಡುಪಿ ರೈಲ್ವೆ ನಿಲ್ದಾಣ ತಲುಪಿದಾಗ ಸುಮಾರು 30 ವರ್ಷ ಪ್ರಾಯದ ವ್ಯಕ್ತಿಯೊಬ್ಬ, ಡೆನಿಲ್ ಕೈಯಲ್ಲಿದ್ದ ಸ್ಯಾಂಡಲ್ ಬಣ್ಣದ ವ್ಯಾನಿಟಿ ಬ್ಯಾಗ್ ಸುಲಿಗೆ ಮಾಡಿ ರೈಲು ಕೋಚಿನ ಬಾಗಿಲಿನಿಂದ ಹೊರಕ್ಕೆ ಹೋಗಿ ಪರಾರಿಯಾದನು ಎಂದು ದೂರಲಾಗಿದೆ.
ಬ್ಯಾಗಿನಲ್ಲಿ ಕರಿಮಣಿ ಸರ, ನೆಕ್ಲೇಸ್, ಬಳೆಗಳು, ಬ್ರಾಸ್ಲೆಟ್, ಎರಡು ಮೊಬೈಲ್ ಫೋನ್, 15 ಸಾವಿರ ರೂ. ನಗದು, ನಾಲ್ಕು ಎಟಿಎಂ ಕಾರ್ಡ್, ಮೂರು ಆಧಾರ್ ಕಾರ್ಡ್ಗಳು, ಪ್ಯಾನ್ ಕಾರ್ಡ್, ಆಸ್ಪತ್ರೆ ಗುರುತಿನ ಚೀಟಿಗಳಿದ್ದವು. ಇವುಗಳ ಒಟ್ಟು ಮೌಲ್ಯ 7 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಕೇರಳ ರಾಜ್ಯದ ಕಣ್ಣೂರು ರೈಲ್ವೆ ಪೊಲೀಸ್ ಠಾಣೆಯಿಂದ ಈ ಪ್ರಕರಣವನ್ನು ಮಣಿಪಾಲ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಮಣಿಪಾಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.