ಉಡುಪಿ, ಜ. 07 (DaijiworldNews/SM): ರಾಜ್ಯ ಸರಕಾರ ವಿಧಿಸಿರುವ ವೀಕೆಂಡ್ ಕರ್ಫ್ಯೂ ಮತ್ತು ನೈಟ್ ಕರ್ಫ್ಯೂ ನಿಂದಾಗಿ ಯಕ್ಷಗಾನ, ನಾಟಕ ಕಲಾವಿದರು ಮತ್ತು ಇವುಗಳಲ್ಲಿ ದುಡಿಯುತ್ತಿರುವ ವಿವಿಧ ಕಾರ್ಮಿಕರಿಗೆ ಆಗುತ್ತಿತುವ ಸಮಸ್ಯೆಗಳನ್ನು ಕುರಿತು ಸರಕಾರದ ಗಮನ ಸೆಳೆಯಲು ಇಂದು ಉಡುಪಿ ಜಿಲ್ಲಾಧಿಕಾರಿ ಕಚೇರಿ ಬಳಿ ಕಲಾವಿದರು ಸಾಂಕೇತಿಕ ಪ್ರತಿಭಟನೆ ನಡೆಸಿದರು.
ಈ ಸಂಧರ್ಬದಲ್ಲಿ ಮಾತಾಡಿದ ಕಿಶೋರ್ ಕುಮಾರ್ ಕುಂದಾಪುರ, ಅಧ್ಯಕ್ಷರು ಕಲಾಕ್ಷೇತ್ರ ಕುಂದಾಪುರ "ಕಲಾವಿದರ ದುಸ್ಥರವಾದ ಬದುಕಿನ ಬಗ್ಗೆ ಸರಕಾರದ ಗಮನ ಸೆಳೆಯುವ ಉದ್ದೇಶದಿಂದ ನಾವು ಇಂದು ಇಲ್ಲಿ ಸೇರಿದ್ದೇವೆ. ಕಲಾವಿದರು ಮಾತ್ರವಲ್ಲದೇ ಕಲೆಯನ್ನು ನಂಬಿಕೊಂಡು ಬದುಕು ಕಟ್ಟಿಕೊಂಡಿರುವ ಸೌಂಡ್ಸ್ ಮತ್ತು ಲೈಟಿಂಗ್ ನ ಕಾರ್ಮಿಕರು, ವಿವಿಧ ಅಂಗಡಿ ವ್ಯಾಪಾರಸ್ಥರು ಮತ್ತಿತರರಿಗೆ ಸರಕಾರದ ಈ ನಿಯಮಗಳಿಂದ ತೀವ್ರವಾಗಿ ತೊಂದರೆಯಾಗುತ್ತಿದೆ. ಇದೀಗ ಸರಕಾರ ವಾರಾಂತ್ಯ ಕರ್ಫ್ಯೂ ಅನ್ನು ಕೂಡಾ ವಿಧಿಸದೆ ಇದರಿಂದಾಗಿ ಮುಂದಿನ ದಿನಗಳಲ್ಲಿ ಕಲಾವಿದರ ಬದುಕು ಹೆಚ್ಚು ದುಸ್ಥರ ವಾಗಲಿದೆ. ಕಲಾವಿದರು ರಾತ್ರಿ ಇಡೀ ದುಡಿದು ಮಾರನೆ ದಿನ ಬೆಳಿಗ್ಗೆ ವಿಶ್ರಾಂತಿ ಪಡೆದುಕೊಳ್ಳುತ್ತಾರೆ ಹೀಗಾಗಿ ಕಲಾವಿದರಿಗೆ ಬೇರೊಂದು ಉದ್ಯೋಗಕ್ಕೆ ಹೋಗುವ ಅವಕಾಶಗಳು ಇರುವುದಿಲ್ಲ. ವೀಕೆಂಡ್ ಕರ್ಫ್ಯೂ ಅನ್ನು ತೆರವುಗೊಳಿಸಿ ಸರಕಾರ ಕಲಾವಿದರಿಗೆ ಕೂಡಾ ಬದುಕಲು ಅವಕಾಶ ಮಾಡಿ ಕೊಡಬೇಕು. ಕೊವಿಡ್ ನಿಯಂತ್ರಣ ಮಾಡುವಲ್ಲಿ ನಮ್ಮ ಜವಾಬ್ದಾರಿ ಕೂಡಾ ಇದೆ. ಕಲಾವಿದರ ಅನ್ನದ ಬಟ್ಟಲನ್ನು ಯಾರೂ ಕೂಡಾ ಕಸಿಬಾರದು" ಎಂದು ಮನವಿ ಮಾಡಿದರು.
ಈ ಸಂಧರ್ಭದಲ್ಲಿ ಉಡುಪಿ ಅಪರ ಜಿಲ್ಲಾದಿಕಾರಿ ಸದಾಶಿವ ಪ್ರಭು ಅವರ ಮೂಲಕ ಮುಖ್ಯಮಂತ್ರಿಗಳಿಗೆ ಕಲಾವಿದರ ಪರಿಸ್ಥಿತಿಯನ್ನು ಮನಗಂಡು ಪ್ರದರ್ಶನಕ್ಕೆ ಅವಕಾಶ ಕಲ್ಪಿಸಬೆಕು ಎಂದು ಮನವಿ ಸಲ್ಲಿಸಲಾಯಿತು.
ನೂರಾರು ಮಂದಿ ಕಲಾವಿದರು ಮತ್ತು ಕಲೆಯನ್ನು ನಂಬಿಕೊಂಡು ಬದಕು ಕಟ್ಟಿಕೊಂಡವರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದು ತಮ್ಮ ಅಳಲನ್ನು ತೋಡಿಕೊಂಡರು.