ಬೆಳ್ತಂಗಡಿ, ಡಿ 07 (DaijiworldNews/MS): ವ್ಯಕ್ತಿಯೊಬ್ಬರು ದ್ವಿಚಕ್ರ ವಾಹನದಲ್ಲಿ ಸಾಗುತ್ತಿರುವಾಗ ವಿದ್ಯುತ್ ತಂತಿ ಕುತ್ತಿಗೆಗೆ ಸಿಲುಕಿ ರಸ್ತೆಗೆಸೆಯಲ್ಪಟ್ಟು ದಾರುಣವಾಗಿ ಮೃತಪಟ್ಟ ಘಟನೆ ಕಾಜೂರು ದಿಡುಪೆ ಸಂಸೆ ರಸ್ತೆಯ ಹೇಡ್ಯ ಸೊಸೈಟಿ ಬಳಿ ಡಿ.06 ರ ಗುರುವಾರ ತಡರಾತ್ರಿ ನಡೆದಿದೆ. ಮೃತರನ್ನು ಕೊಯ್ಯುರು ನಿವಾಸಿ ರಘು ಎಂದು ಗುರುತಿಸಲಾಗಿದೆ.
ಇದಕ್ಕೂ ಮುಂಚೆ ಹುಲ್ಲು ಸಾಗಾಟದ ಪಿಕಪ್ ವಾಹನ ವಿದ್ಯುತ್ ಕಂಬಕ್ಕೆ ಢಿಕ್ಕಿಯಾದ ಪರಿಣಾಮ ನಾಲ್ಕೈದು ವಿದ್ಯುತ್ ಕಂಬಗಳು ತುಂಡಾಗಿ ಅದರ ತಂತಿಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು. ಈ ಘಟನೆಯ ಬಗ್ಗೆ ಅರಿವಲ್ಲದೆ ದ್ವಿಚಕ್ರ ವಾಹನದಲ್ಲಿ ದಿಡುಪೆ ಕಡೆಯಿಂದ ಸಾಗುತ್ತಿದ್ದ ರಘು ಅವರು ರಾತ್ರಿ 11 ಗಂಟೆ ವೇಳೆಗೆ ಹೇಡ್ಯ ಸೊಸೈಟಿ ಬಳಿ ರಘು ಅವರ ಕುತ್ತಿಗೆಗೆ ತಂತಿಗಳು ಸಿಕ್ಕಿಕೊಂಡು ರಸ್ತೆಗೆಸೆಯಲ್ಪಟ್ಟಿದ್ದಾರೆ. ತಲೆಗೆ ಗಂಭೀರ ಗಾಯಗೊಂಡ ರಘು ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಪಘಾತದ ವೇಳೆ ತಂತಿಯಲ್ಲಿ ವಿದ್ಯುತ್ ಪ್ರವಹಿಸುತ್ತಿತ್ತೇ ಎಂಬ ಬಗ್ಗೆ ಮಾಹಿತಿ ಲಭಿಸಿಲ್ಲ.ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.