ಉಡುಪಿ, ಜ 06 (DaijiworldNews/HR): ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಹಿತರಕ್ಷಣಾ ಸಮಿತಿ(ರಿ) ಜಿಲ್ಲಾ ಘಟಕ, ಉಡುಪಿ ಹಾಗೂ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘಟನೆಗಳ ಒಕ್ಕೂಟವು ಅತಿಥಿ ಉಪನ್ಯಾಸಕರ ಸೇವೆಯನ್ನು ವಿಲೀನಗೊಳಿಸುವುದು ಮತ್ತು ಕಾಯಂ ಗೊಳಿಸುವಂತೆ ಆಗ್ರಹಿಸಿ ಉಪನ್ಯಾಸಕರುಗಳು ಮುಖ್ಯಮಂತ್ರಿ ಬೊಮ್ಮಾಯಿ, ಅಶ್ವತ್ಥ ನಾರಾಯಣ್ ರವರ ಮುಖವಾಡ ಧರಿಸಿ, ಟೀ ಮಾರಾಟ ಮಾಡುವ ಕೇಂದ್ರ ಸರ್ಕಾರದ ನಿಲುವನ್ನು ವಿರೋಧಿಸಿ ಅಜ್ಜರಕಾಡುವಿನ ಹುತಾತ್ಮರ ಸ್ಮಾರಕದ ಬಳಿ ಅಣುಕು ಪ್ರದರ್ಶನ ನಡೆಸಿ ಪ್ರತಿಭಟನೆ ನಡೆಸಲಾಯಿತು.
ಈ ಕುರಿತು ಅತಿಥಿ ಉಪನ್ಯಾಸಕರಾದ ಶಾಹಿದಾ ಮಾತನಾಡಿ, "ಕರ್ನಾಟಕ ನಾಗರೀಕ ಸೇವೆ ಮತ್ತು ನಿಯಮ 14 ರ ಅಡಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರ ಸೇವೆಯನ್ನು ವಿಲೀನಗೊಳಿಸುವುದು ಮತ್ತು ನಿಯಮ ಬಾಹಿರ ೨೦೨೧ ರ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಅಧಿಸೂಚನೆಯನ್ನು ತಡೆಹಿಡಿಯಬೇಕು. ಸ್ನಾತಕೋತ್ತರ ಮುಗಿದು ಉಪನ್ಯಾಸಕರಾಗಲು ಅರ್ಹತೆ ಇದ್ದರೂ ಸರಕಾರದ ಯಾವುದೇ ಸೌಲಭ್ಯ ಸಿಗುತ್ತಿಲ್ಲ. ವಿದ್ಯಾವಂತರಾಗದ್ದುಕೊಂಡು ವೇತನ ಸಿಗದ ದುರವಸ್ಥೆಗೆ ಬಂದು ಇಳಿದಿದ್ದೇವೆ. ನಮ್ಮ ಈ ರೀತಿಯ ಕಷ್ಟದಲ್ಲಿ ಮಕ್ಕಳಿಗೆ ಹೇಗೆ ಕಲಿಸಿಕೊಡುವುದು? ಎಂದು ಪ್ರಶ್ನಿಸಿದ್ದಾರೆ.
ಮತ್ತೋರ್ವ ಅತಿಥಿ ಉಪನ್ಯಾಸಕರಾದ ಮಣಿಕಂಠ ದೇವಾಡಿಗ ಮಾತನಾಡಿ, "ರಾಜ್ಯದ 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅನೇಕ ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿರುವ ಅತಿಥಿ ಉಪನ್ಯಾಸಕರನ್ನು ಸೇವೆಯಲ್ಲಿ ವಿಲೀನಗೊಳಿಸುವ ಸಂಬಂಧ ಕರ್ನಾಟಕ ನಾಗರೀಕ ಸೇವೆ ಮತ್ತು ನಿಯಮ 14 ದ ಅಡಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರ ಸೇವೆಯನ್ನು ವಿಲೀನಗೊಳಿಸುವುದು ಮತ್ತು ನಿಯಮ ಬಾಹಿರ 2021ರ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಅಧಿಸೂಚನೆಯನ್ನು ತಡೆಹಿಡಿದು ಕಾಲೇಜು ಶಿಕ್ಷಣ ಇಲಾಖೆಯ ಅಧಿಕಾರಿಗಳ ಜೊತೆ ಸೇಮ ವಿಲೀನ ಸಂಬಂಧ 23/08/2021 ಮತ್ತು 05/09/2021 ರ ಕೈಗೊಂಡ ನಿರ್ಣಯಗಳ ಕಡತವನ್ನು ವಿಧಾನ ಸಭೆ ಮತ್ತು ವಿಧಾನ ಪರಿಷತ್ನ ಪ್ರಸ್ತುತ ಅಧಿವೇಶನದಲ್ಲಿ ಚರ್ಚಿಸಿ ಸೂಕ್ತ ನಿರ್ಣಯವನ್ನು ಕೈಗೊಳ್ಳುವಂತೆ ಆಗ್ರಹಿಸಿ ಪ್ರತಿಭಟನೆ ಕೈಗೊಳ್ಳಲಾಗಿದೆ" ಎಂದರು.
ಇನ್ನು ಇದುವರೆಗಿನ ಪ್ರತಿಭಟನೆಗೆ ಸರಕಾರ ಮಣಿಯಲೇ ಇಲ್ಲ. ನಮ್ಮ ಬೇಡಿಕೆಗೂ ಸ್ಪಂದಿಸಿಲ್ಲ , ಸ್ಥಳೀಯ ಶಾಸಕರು ಸಚಿವರಲ್ಲಿ ಸಮಸ್ಯೆ ಹೇಳಿಕೊಂಡರೆ ಉದ್ಧಟತನದಿಂದ ಮಾತನಾಡುತ್ತಾರೆ. ಕಳೆದ 27 ದಿನದಿಂದ ಕಾಲೇಜುಗಳಲ್ಲಿ ಸರಿಯಾಗಿ ಅತಿಥಿ ಉಪನ್ಯಾಸಕರಿಲ್ಲದೆ ಪಾಠಗಳು ನಡೆಯುತ್ತಿಲ್ಲ. ಉಡುಪಿಯಲ್ಲಿ ಒಟ್ಟು 546 ಅತಿಥಿ ಉಪನ್ಯಾಸಕರಿದ್ದಾರೆ. ವರ್ಷದಲ್ಲಿ ಹತ್ತು ತಿಂಗಳು ವೇತನ ಕೊಡಬೇಕು ಎನ್ನುವ ನಿಯಮ ಇದ್ದರೂ ಕೇವಲ ಎಂಟು ತಿಂಗಳು ಮಾತ್ರ ವೇತನ ನೀಡಲಾಗುತ್ತಿದೆ. ಇದರಿಂದಾಗಿ ಜೀವನ ನಡೆಸುವುದು ಕಷ್ಟ. ಸರಕಾರ ಆದಷ್ಟು ಬೇಗ ಈ ಸಮಸ್ಯೆಯನ್ನು ಬಗೆಹರಿಸಿ ಕನಿಷ್ಠ ವೇತನ ನೀಡುವಂತೆ ಆಗ್ರಹಿಸಿದ್ದಾರೆ.