ಸುಬ್ರಹ್ಮಣ್ಯ, ಜ 06 (DaijiworldNews/AN): ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕಿನ ಹಿನ್ನಲೆಯಲ್ಲಿ ಜಿಲ್ಲೆಯ ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರ್ಕಾರದ ಆದೇಶದಂತೆ ಎಲ್ಲಾ ರೀತಿಯ ಸೇವೆಗಳನ್ನು ರದ್ದುಗೊಳಿಸಲಾಗಿದೆ. ಜ.6 ರ ಇಂದಿನಿಂದಲೇ ಈ ಆದೇಶ ಜಾರಿಗೆ ಬರಲಿದ್ದು, ಸರ್ಕಾರದ ಮುಂದಿನ ಆದೇಶದವರೆಗೆ ಯಾವುದೇ ಸೇವೆಗೆ ಅವಕಾಶವಿಲ್ಲ.
’ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಮಾತ್ರ ಅವಕಾಶ ಇದ್ದು, ದೇವಾಲಯದಲ್ಲಿ ಅರ್ಚಕರುಗಳಿಂದ ಸಂಪ್ರದಾಯಂತೆ ನಿತ್ಯ ಪೂಜಾದಿ ವಿನಿಯೋಗಗಳು ಎಂದಿನಂತೆ ನಡೆಯಲಿದೆ’ ಎಂದು ದೇವಸ್ಥಾನದ ಪ್ರಕಟನೆಯಲ್ಲಿ ತಿಳಿಸಿದೆ.
ಶುಕ್ರವಾರ ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆ ತನಕ ವಾರಾಂತ್ಯದ ಕರ್ಫ್ಯೂ ಜಾರಿಯಲ್ಲಿರುವುದರಿಂದ ಶನಿವಾರ ಮತ್ತು ಭಾನುವಾರಗಳಂದು ದೇವರ ದರ್ಶನಕ್ಕೂ ಅವಕಾಶ ಇರುವುದಿಲ್ಲ. ಎರಡು ಡೋಸ್ ಕೋವಿಡ್ ಲಸಿಕೆ ಹಾಕಿಸಿಕೊಂಡಿರುವ ಭಕ್ತಾದಿಗಳಿಗೆ ಮಾತ್ರ ದೇವರ ದರ್ಶನಕ್ಕೆ ಅವಕಾಶ ನೀಡಲಾಗುವುದು. ದೇವಳದ ಒಳಾಂಗಣ ಮತ್ತು ಹೊರಾಂಗಣಗಳನ್ನು ಆಗಾಗ ಸ್ಯಾನಿಟೈಸಿಂಗ್ ಮಾಡಿ ಶುಚಿಗೊಳಿಸುವ ಕಾರ್ಯ ನಡೆಸಲಾಗುವುದು. ಭಕ್ತರು ಸರಕಾರ ಮತ್ತು ಜಿಲ್ಲಾಡಳಿತ ಜಾರಿಗೆ ತಂದಿರುವ ಕೋವಿಡ್-19 ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.