ಉಡುಪಿ, ಜ. 05 (DaijiworldNews/SM): ಜಿಲ್ಲೆಯಲ್ಲಿ ಕಟ್ಟಡ ಕಾಮಗಾರಿಗಳನ್ನು ಕೈಗೊಳ್ಳಲು ಅಗತ್ಯವಿರುವ ಮರಳಿನ ದಾಸ್ತಾನಿದ್ದು, ಸಾರ್ವಜನಿಕರು ಸ್ಯಾಂಡ್ ಆಪ್ ಮೂಲಕ ಬೇಡಿಕೆಗಳನ್ನು ಸಲ್ಲಿಸುವುದರೊಂದಿಗೆ ಅಗತ್ಯವಿರುವ ಮರಳನ್ನು ಪಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು.
ಅವರು ಇಂದು ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಹಾಲ್ ನಲ್ಲಿ ಮರಳು ವಿತರಣೆ ಕುರಿತು ನಡೆದ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಕಟ್ಟಡ ಕಾಮಗಾರಿ ಸೇರಿದಂತೆ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲು ಅಗತ್ಯವಿರುವ ಮರಳನ್ನು ಸಾರ್ವಜನಿಕರಿಗೆ ಪಾರದರ್ಶಕವಾಗಿ ವಿತರಿಸಲು ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿಯು ಸ್ಯಾಂಡ್ ಆಪ್ ಗಳಲ್ಲಿನ ಬೇಡಿಕೆಗನುಗುಣವಾಗಿ ವಿತರಿಸಲು ಮುಂದಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಜಿಲ್ಲೆಯಲ್ಲಿ ಅಕ್ರಮವಾಗಿ ಮರಳು ಮಾರಾಟವಾಗುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ. ಇವುಗಳ ನಿಯಂತ್ರಣಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಮುನ್ನೆಚ್ಚರಿಕ ಕ್ರಮಗಳನ್ನು ವಹಿಸಬೇಕು , ಮರಳು ಸಾಗಾಣಿಕೆ ವಾಹನ ಹಾಗೂ ದೋಣಿಗಳಲ್ಲಿ ಅಳವಡಿಸಿರುವ ಜಿಪಿಎಸ್ ನ ಪರಿಶೀಲಿಸುವುದರೊಂದಿಗೆ ಚಲನ ವಲನಗಳ ಬಗ್ಗೆ ನಿಗಾ ವಹಿಸಿ ಒಂದೊಮ್ಮೆ ನಿಯಮಗಳನ್ನು ಉಲ್ಲಂಘಿಸಿದ್ದಲ್ಲಿ ಅಂತಹವರ ಮೇಲೆ ನಿರ್ದಾಕ್ಷಿಣ್ಯವಾಗಿ ದಂಡ ವಸೂಲಿ ಮಾಡಬೇಕು, ಮರಳು ತೆಗೆಯುವ ಧಕ್ಕೆ ಹಾಗೂ ದಾಸ್ತಾನು ಪ್ರದೇಶಗಳಲ್ಲಿ ಸಿಸಿಟಿವಿ ಅಳವಡಿಸುವಂತೆ ಸೂಚನೆ ನೀಡಿದರು.
ಕುಂದಾಪುರ ವ್ಯಾಪ್ತಿಯಲ್ಲಿ ದೋಣಿಗಳ ಜಿಪಿಎಸ್ ಉಲ್ಲಂಘನೆ ಮಾಡಿದ ಮರಳು ಪರವಾನಗಿದಾರರ ವಿರುದ್ದ 16 ಪ್ರಕರಣ ದಾಖಲಿಸಿ 8 ಲಕ್ಷ ದಂಢ ವಿಧಿಸಲಾಗಿದೆ ಉಡುಪಿ ಮತ್ತು ಬ್ರಹ್ಮಾವರದಲ್ಲಿ 3 ಪ್ರಕರಣ ದಾಖಲಿಸಿ 50000 ಸಾವಿರ ದಂಢ ವಿಧಿಸುವುದರ ಜೊತೆಗೆ ಅನಧಿಕೃತವಾಗಿ ಮರಳು ಗಣಿಗಾರಿಕೆ ನಡೆಸಿ ಮರಳು ದಾಸ್ತಾನು ಮಾಡಿದವರ ವಿರುದ್ದ 34 ಪ್ರಕರಣ ದಾಖಲಿಸಿ 13 ಲಕ್ಷಕ್ಕೂ ಹೆಚ್ಚು ದಂಢ ವಿಧಿಸಲಾಗಿದೆ. ವಾಹನ ಜಿಪಿಎಸ್ ಉಲ್ಲಂಘಿಸಿದ 76 ಪ್ರಕರಣ ದಾಖಲಿಸಿ 5 ಲಕ್ಷ ದಂಡ ವಿಧಿಸಲಾಗಿದೆ ಎಂದರು.