ಮಂಗಳೂರು, ಜ 05 (DaijiworldNews/AN): ರಾಜ್ಯದಲ್ಲಿ ಇತ್ತೀಚೆಗೆ ನಡೆದಿರುವ ಕೆಲವು ಚುನಾವಣೆಯ ಫಲಿತಾಂಶವನ್ನು ಗಮನಿಸಿದಾಗ ರಾಜ್ಯದಲ್ಲಿ ಕಾಂಗ್ರೆಸ್ ಪರ ಒಲವಿದ್ದು, ಮುಂದೆ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಪಡೆಯಲಿದ್ದು, ಆ ಮೂಲಕ 2023ರ ವರ್ಷ ಸಂಪೂರ್ಣ ‘ಕಾಂಗ್ರೆಸ್ ವರ್ಷ’ ಆಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಭವಿಷ್ಯ ನುಡಿದರು.
ನಗರದಲ್ಲಿ ಡಿ.೦4 ರ ಮಂಗಳವಾರ ಮಾಧ್ಯಮದೊಂದಿಗೆ ಮಾತನಾಡಿದ ಅವರು, "ಉಪಚುನಾವಣೆಗಳಲ್ಲಿ, ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯಲ್ಲಿ ಫಲಿತಾಂಶ ಕಾಂಗ್ರೆಸ್ ಪಕ್ಷಕ್ಕೆ ಪೂರಕವಾಗಿ ಬಂದಿದೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಜನರು ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಲಿದ್ದಾರೆ" ಎಂದು ಹೇಳಿದರು
ಇನ್ನು ರಾಮನಗರದಲ್ಲಿ ನಡೆದ ಘಟನೆಗೆ ಪ್ರತಿಕ್ರಿಯಿಸಿದ ಅವರು, "ರಾಮನಗರ ಘಟನೆ ಬಿಜೆಪಿಯ ವಿಶ್ವರೂಪವನ್ನು ತೋರಿಸಿದೆ. ಸಿಎಂ ಹಾಜರಿದ್ದ ಕಾರ್ಯಕ್ರಮದಲ್ಲಿ ಸಚಿವರಾದವರಿಗೆ ಜನರ ಸಮ್ಮುಖದಲ್ಲಿ ಏನು ಮಾತನಾಡಬೇಕು ಎಂಬುದರ ಬಗ್ಗೆ ಅರಿವಿರಬೇಕು. ರಾಮನಗರದಲ್ಲಿ ಬಿಜೆಪಿಗೆ ನೆಲೆ ಇಲ್ಲ. ಹಾಗಾಗಿ ಕೆಟ್ಟ ಚೌಕಟ್ಟಿನಲ್ಲಿ ಕಾಂಗ್ರೆಸ್ನ್ನು ಜನರ ಮುಂದೆ ಬಿಂಬಿಸಲು ಹೊರಟಿದ್ದಾರೆ" ಎಂದು ಆರೋಪಿಸಿದರು.
ಇನ್ನು ಮೇಕೆದಾಟು ವಿಚಾರವಾಗಿ ಮಾತನಾಡಿದ ಅವರು,"ಬಿಜೆಪಿಯೂ ಸಚಿವರುಗಳನ್ನು ಕರೆದು ರಥಯಾತ್ರೆ ನಡೆಸುವುದು, ಚುನಾವಣೆಗಳನ್ನು ನಡೆಸುವುದು ಮಾಡುತ್ತಿದೆ. ಅವರಿಗೆ ಬೇಕಾದಂತೆ ವರ್ತಿಸುವ ಸರ್ಕಾರ, ಕಾಂಗ್ರೆಸ್ ಮಾಡಿದರೆ ಮಾತ್ರ ತಪ್ಪು ಎನ್ನುತ್ತಿದೆ. ಅಧಿಕಾರ ದುರುಪಯೋಗಪಡಿಸಿ ಹೇಗಾದರೂ ಮಾಡಿ ನಮ್ಮ ಪಾದಯಾತ್ರೆಯನ್ನು ತಡೆಯಲು ಯತ್ನಿಸುತ್ತಿದ್ದಾರೆ. ಸಿಎಂ ಕೇಂದ್ರದ ಅನುಮತಿ ಪಡೆದು ಮೇಕೆದಾಟು ಕಾಮಗಾರಿಯನ್ನು ನಾಳೆಯೇ ಆರಂಭಿಸಲಿ, ಆಗ ನಾವು ಅವರನ್ನು ಬೆಂಬಲಿಸುತ್ತೇವೆ" ಎಂದು ಹೇಳಿದರು.
ಮುಂದಿನ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ನ ಕಾರ್ಯತಂತ್ರದ ಕುರಿತು ಮಾತನಾಡಿದ ಶಿವಕುಮಾರ್, ಬಿಜೆಪಿ ಸರ್ಕಾರದ ಆಡಳಿತದ ವೈಫಲ್ಯದ ಬಗ್ಗೆ ಮತದಾರರಿಗೆ ಅರಿವು ಮೂಡಿಸುತ್ತೇವೆ. ರಾಜ್ಯದ ಹಾಗೂ ರೈತರ ಆದಾಯ ದ್ವಿಗುಣಗೊಳಿಸುತ್ತೇವೆ ಎಂದರು. ಆದರೆ ಎಲ್ಲಿ ದ್ವಿಗುಣಗೊಂಡಿದೆ? ಪೆಟ್ರೋಲ್, ಗ್ಯಾಸ್ ಮತ್ತು ಡೀಸೆಲ್ ಬೆಲೆ ಪ್ರತಿದಿನ ಏರಿಕೆಯಾಗುತ್ತಿದೆ. ಪ್ರಕೃತಿ ವಿಕೋಪ, ಬೆಳೆ ನಾಶಗಳಿಗೆ ಪರಿಹಾರ ನೀಡಿದ್ದೇವೆ ಎಂದು ಹೇಳುತ್ತಿದ್ದಾರೆ. ಆದರೆ ಯಾರಿಗೆ ಕೊಟ್ಟಿದ್ದಾರೆಂದು ಅವರು ಹೇಳಲಿ? ಇವೆಲ್ಲವೂ ಬರೀ ಪೊಳ್ಳು ಮಾತಿಗಷ್ಟೇ" ಎಂದು ಆರೋಪಿದರು.