ಪುತ್ತೂರು, ಡಿ 05(DaijiworldNews/MS): ಉಪ್ಪಿನಂಗಡಿಯಲ್ಲಿ ಡಿ.14ರ ರಾತ್ರಿ ಠಾಣೆಯ ಮುಂಭಾಗದಲ್ಲಿ ನಡೆದ ಗಲಭೆ ವೇಳೆ ಪೊಲೀಸರ ಮೇಲೆ ಹಲ್ಲೆ ಮಾಡಿರುವ ಆರೋಪದಲ್ಲಿ ಬಂಧಿತರಾಗಿದ್ದ 10 ಮಂದಿ ಆರೋಪಿಗಳಿಗೆ ಪುತ್ತೂರು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಪೊಲೀಸ್ ಠಾಣೆಯ ಮುಂದೆ ಜಮಾಯಿಸಿದ್ದ ಪ್ರತಿಭಟನಕಾರರು
ಬಂಟ್ವಾಳ ತಾಲೂಕಿನ ಕಾರಿಂಜ ನಿವಾಸಿ ಮೊಹಮ್ಮದ್ ತ್ವಾಹಿರ್, ಬೆಳ್ತಂಗಡಿ ತಾಲೂಕಿನ ಮಚ್ಚಿನ ನಿವಾಸಿ ಸಾಧಿಕ್, ಬಂಟ್ವಾಳದ ಅಬ್ದುಲ್ ಮುಬಾರಕ್, ಅಬ್ದುಲ್, ಪುತ್ತೂರು ಪಾಲ್ತಾಡ್ ನಿವಾಸಿ ಮೊಹಮ್ಮದ್ ಜಾಹಿದ್, ಬೆಳ್ತಂಗಡಿ ತಾಲೂಕಿನ ಬಾರ್ಯ ನಿವಾಸಿ ಸ್ವಾಜೀರ್ ಮೊಹಮ್ಮದ್ ಫೈಝಲ್, ಮಂಗಳೂರಿನ ಮೊಹಮ್ಮದ್ ಹನೀಫ್, 34 ನೆಕ್ಕಿಲಾಡಿಯ ಎನ್.ಕಾಸಿಂ, ಬಂಟ್ವಾಳದ ಮೊಹಮ್ಮದ್ ಆಶೀಫ್, ಕಡಬ ಕೊಯ್ಲ ನಿವಾಸಿ ತೌಫೀಲ್ ಮೊಹಮ್ಮದ್ ಇವರಿಗೆ ಜಾಮೀನು ದೊರಕಿದೆ.
ತಲವಾರು ದಾಳಿ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗಾಗಿ ಉಪ್ಪಿನಂಗಡಿ ಪೊಲೀಸರು ವಶಕ್ಕೆ ಪಡೆದಿದ್ದ ಪಿಎಫ್ಐ ಮುಖಂಡರನ್ನು ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿ ಡಿ.14ರಂದು ನಡೆದ ಪ್ರತಿಭಟನೆ ಸಂದರ್ಭ ನಡೆದ ಸಾರ್ವಜನಿಕ ಶಾಂತಿಭಂಗ, ಪೊಲೀಸರ ಕರ್ತವ್ಯಕ್ಕೆ ಅಡ್ಡಿ, ಕೋವಿಡ್ ನಿಯಮಾವಳಿ ಉಲ್ಲಂಘನೆ, ಕೊಲೆ ಯತ್ನ ಮತ್ತಿತರ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ವಿರುದ್ಧ 3 ಪ್ರತ್ಯೇಕ ಪ್ರಕರಣ ದಾಖಲಿಸಿದ್ದು, ಅದರಲ್ಲಿ ಒಂದು ಪ್ರಕರಣಕ್ಕೆ ಸಂಬಂಧಿಸಿ 10 ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಬಂಧಿತರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು.
ಆರೋಪಿಗಳ ಪರ ನ್ಯಾಯವಾದಿ ನೂರುದ್ದೀನ್ ಸಾಲ್ಮರ, ಅಶ್ರಫ್ ಕೆ ಅಗ್ನಾಡಿ, ಅಬ್ದುಲ್ ಮಜೀದ್ ಖಾನ್ ಮತ್ತು ಅಬ್ದುಲ್ ರಹಿಮಾನ್ ಹಿರೇಬಂಡಾಡಿ ವಾದಿಸಿದ್ದರು.