ಮೂಡುಬಿದಿರೆ, ಡಿ 05 (DaijiworldNews/MS): ಯುವ ಪೊಲೀಸ್ ಸಿಬ್ಬಂದಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಮೂಡುಬಿದಿರೆಯಲ್ಲಿ ನಡೆದಿದೆ.
ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂತೋಷ್ (35) ಹೃದಯಾಘಾತದಿಂದ ಮೃತಪಟ್ಟ ಪೊಲೀಸ್ ಸಿಬ್ಬಂದಿಯಾಗಿದ್ದಾರೆ.
ತೀರ್ಥಹಳ್ಳಿಗೆ ತೆರಳಿದ್ದ ಅವರು ಅಲ್ಲಿ ಮಂಗಳವಾರ ರಾತ್ರಿ ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತು. ಅಷ್ಟರಲ್ಲಿ ಅವರು ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ.
ಈ ಕುರಿತು ಸಂತಾಪ ವ್ಯಕ್ತಪಡಿಸಿ ಟ್ವೀಟ್ ಮಾಡಿರುವ ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ " ಪೊಲೀಸ್ ಕುಟುಂಬದ ಕಿರಿಯ ಸದಸ್ಯರೊಬ್ಬರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಸಂತೋಷ್ ಅವರು ಕೊನೆಯುಸಿರೆಳೆದಿದ್ದು, ಅವರ ಆತ್ಮಕೆ ಶಾಂತಿ ಸಿಗಲಿ " ಎಂದು ಕಂಬನಿ ಮಿಡಿದಿದ್ದಾರೆ.