ಮಂಗಳೂರು, ಡಿ 05(DaijiworldNews/MS): ಐಸಿಎಸ್ ಉಗ್ರ ಸಂಘಟನೆ ಜತೆ ಸಂಪರ್ಕದ ಆರೋಪದ ಮೇಲೆ ಮಂಗಳೂರಿನಲ್ಲಿ ರಾಷ್ಟ್ರೀಯ ತನಿಖಾ ದಳ ಡಿ.03 ಸೋಮವಾರ ಬಂಧಿಸಿದ ಉಳ್ಳಾಲದ ಮಾಜಿ ಶಾಸಕ ಇದಿನಬ್ಬ ಮೊಮ್ಮಗನ ಪತ್ನಿ ಮರಿಯಂ ಬಳಿಯಿಂದ ಮೊಬೈಲ್ ಫೋನ್ ಅನ್ನು ಎನ್.ಐ.ಎ ವಶಪಡಿಸಿಕೊಂಡಿದೆ.
ಸೋಮವಾರ ದಿನಪೂರ್ತಿ ಆಕೆಯ ವಿಚಾರಣೆ ನಡೆಸಿದ ತಂಡ ಹೆಚ್ಚಿನ ತನಿಖೆಗಾಗಿ ಮಂಗಳವಾರ ನಗರದಿಂದ ದೆಹಲಿಗೆ ಕರೆದುಕೊಂಡು ಹೋಗಿದೆ. ಐಸಿಎಸ್ ಉಗ್ರ ಸಂಘಟನೆ ನಂಟು ಇರುವ ಆರೋಪದಲ್ಲಿ ಐದು ತಿಂಗಳ ಹಿಂದೆ ಆಗಮಿಸಿದ ಎನ್.ಐ.ಎ ತಂಡ ಇದಿನಬ್ಬರ ಪುತ್ರ ಬಿ. ಎಂ ಭಾಷಾ ಅವರ ಮನೆಗೆ ದಾಳಿ ನಡೆಸಿತ್ತು.ಭಾಷಾ ಅವರ ಕಿರಿಯ ಪುತ್ರ ಅಮ್ಮರ್ ನನ್ನು ಬಂಧಿಸಿ ದಿಲ್ಲಿಗೆ ಕರೆದೊಯ್ದಿತ್ತು.
ಈ ವೇಳೆ ಮೊಬೈಲ್ ಫೋನ್, ಹಣ ವರ್ಗಾವಣೆ ಬಗ್ಗೆ ಬ್ಯಾಂಕ್ ಖಾತೆಯ ಪರಿಶೀಲನೆ ನಡೆಸಲಾಗಿತ್ತು. ಆಗ ಉಗ್ರ ಸಂಘಟನೆ ಜತೆಗಿನ ನಂಟಿನಲ್ಲಿ ಮರಿಯಂಳ ಪಾತ್ರ ಇರುವುದನ್ನು ಕಂಡು ಬಂದಿತ್ತು.ಆದರೆ ಮನೆಯಲ್ಲಿ ವಿಚಾರಣೆ ನಡೆಸಿದ ತಂಡ ಆಗ ಅಮ್ಮರ್’ನನ್ನು ಮಾತ್ರ ಕರೆದಿತ್ತು.ಆಗ ಮರಿಯಂ ಐದು ತಿಂಗಳ ಮಗುವಿನ ತಾಯಿಯಾಗಿದ್ದಳು.
ಕಳೆದ ಐದು ತಿಂಗಳ ಅವಧಿಯಲ್ಲಿ ಮರಿಯಂಳ ಚಲನವಲನದ ಮೇಲೆ ತೀವ್ರ ನಿಗಾ ಇರಿಸಿದ್ದ ಎನ್.ಐ.ಎ ತಂಡ ಕೊನೆಗೂ ಆಕೆಯನ್ನು ಬಂಧಿಸಿದೆ. ಆಕೆ ಬಳಸುತ್ತಿದ್ದ ಲ್ಯಾಪ್ ಟಾಪ್ ಅನ್ನು ಮೊದಲೇ ವಶಪಡಿಸಿ ತೆಗೆದುಕೊಂಡು ಹೋಗಿದ್ದ ಎನ್.ಐ.ಎ ತಂಡ ಆಕೆಗೆ ಉಗ್ರ ನಂಟು ಇರುವುದನ್ನು ಖಚಿತಪಡಿಸಿಕೊಂಡ ಇದೀಕ ಆಕೆಯನ್ನು ಬಂಧಿಸಿ ದೆಹಲಿಗೆ ಕರೆದೊಯ್ದಿದೆ.