ಮಂಗಳೂರು, ಜ. 4 (DaijiworldNews/SM): ಓಮಿಕ್ರಾನ್ ಕೋವಿಡ್ ವಿಚಾರದಲ್ಲಿ ಸರ್ಕಾರ ಜನರಲ್ಲಿ ಭೀತಿ ಸೃಷ್ಟಿಸುತ್ತಿದೆ. ಮೇಕೆದಾಟು ಯೋಜನೆ ಹೋರಾಟ ನಡೆಸದಂತೆ ಮಾಡಲು ಈ ತಂತ್ರ ಮಾಡಲಾಗುತ್ತಿದೆ ಎಂದು ಮಾಜಿ ಸಚಿವ ಯು.ಟಿ. ಖಾದರ್ ಟೀಕಿಸಿದ್ದಾರೆ.
ಈ ಹಿಂದೆ ರೋಗದ ಬಗ್ಗೆ ಮಾಹಿತಿ ಇದ್ದಾಗ ಬೇರೆ ಬೇರೆ ಪಾದಯಾತ್ರೆ ಸಭೆ ಮಾಡಿದ್ದರು. ಆದ್ರೆ ಇದೀಗಾ ಮೇಕೆದಾಟಿನಿಂದ ಕರ್ನಾಟಕಕ್ಕೆ ದ್ರೋಹ ಆಗುವಾಗ ರೋಗದ ಭೀತಿ ಸೃಷ್ಟಿಸುತ್ತಿದ್ದಾರೆ. ರಾಜ್ಯ ಸರ್ಕಾರ ಇಲ್ಲಿ ರಾಜಕೀಯ ಮಾಡ್ತಾ ಇದೆ. ಜನರಲ್ಲಿ ಭಯ ಹುಟ್ಟಿಸಿ ಸಂಕಷ್ಟದ ಕೂಪಕ್ಕೆ ತಲ್ಲುತ್ತಿದೆ. ರಾಜ್ಯದಲ್ಲಿ ಓಮಿಕ್ರಾನ್ ಕೋವಿಡ್ ನ ಪಾಸಿಟಿವಿಟಿ ಎಷ್ಟು ಎಂದು ತಿಳಿಸಲಿ ಎಂದು ಅವರು ಆಗ್ರಹಿಸಿದ್ದಾರೆ.
ಓಮಿಕ್ರಾನ್ ಬಗ್ಗೆ ತಜ್ಞರು ನೀಡಿದ ಸಲಹೆ ಸೂಚನೆ ಜನರ ಮುಂದೆ ಇಡಲಿ. ಅದು ಬಿಟ್ಟು ರಾಜಕೀಯಕ್ಕಾಗಿ ಓಮಿಕ್ರಾನ್ ಲಾಕ್ ಡೌನ್ ಮಾಡುದು ಬೇಡ. ಎತ್ತಿನಹೊಳೆ ಯೋಜನೆ ಬಗ್ಗೆ ಬಿಜೆಪಿ ಸಂಸದರು ಶಾಸಕರು ರಸ್ತೆಯಲ್ಲಿ ಪ್ರತಿಭಟನೆ ಮಾಡಿದ್ದರು. ಆದ್ರೆ ಯಾವೊಬ್ಬರು ಸದನದಲ್ಲಿ ಧ್ವನಿ ಎತ್ತಿಲ್ಲ. ಜನರು ಪದೇ ಪದೇ ಮೂರ್ಖರಾಗಲು ಸಿದ್ದರಿಲ್ಲ. ಈಗಾಗಲೇ ನಮಗೆ ಕೇಳಿ ಕೇಳಿ ಸಾಕಾಗಿದೆ ಎಂದು ಟೀಕಿಸಿದರು.
ಎರಡು ಸಾವಿರಕ್ಕೆ ಮರಳು ಮನೆಗೆ ಬಂದಿದೆ. ಚಿನ್ನದ ದರ ೨೦ ಸಾವಿರಕ್ಕೆ ರೂಪಾಯಿಗೆ ಬಂದಿದೆ, ಡಾಲರ್ ರೇಟ್ ೨೦ ರೂಪಾಯಿ ಆಗಿದೆ. ಜಿಲ್ಲೆಯಲ್ಲಿ ಇದರ ಬಗ್ಗೆ ಕೇಳಿ ಜನರಿಗೆ ಸಾಕಾಗಿದೆ ಎಂದು ಮಂಗಳೂರಿನಲ್ಲಿ ಮಾಜಿ ಸಚಿವ ಯುಟಿ ಖಾದರ್ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದ್ದಾರೆ.