ಕುಂದಾಪುರ, ಜ 04 (DaijiworldaNews/HR): ಸೇತುವೆ ಮೇಲಿನಿಂದ ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಯುವಕನನ್ನು ಖಾರ್ವಿ ಸಮಾಜದ ಮೀನುಗಾರರು ಸಕಾಲಿಕ ಕ್ರಮದಿಂದ ರಕ್ಷಿಸಿದ ಘಟನೆ ಹೇರಿಕುದ್ರು ಸೇತುವೆಯ ಪಂಚ ಗಂಗಾವಳಿ ಹೊಳೆಯಲ್ಲಿ ನಡೆದಿದೆ.
ಇಂದು ಮಧ್ಯಾಹ್ನ ಕುಂದಾಪುರದ ದಿಕ್ಕಿನಿಂದ ನಡೆದು ಬಂದ ಮಂಗಳೂರು ಮೂಲದವದವನು ಎನ್ನಲಾದ ಮಹೇಂದ್ರ (32)ಎಂಬ ಯುವಕ ಹೇರಿಕುದ್ರು ಸೇತುವೆ ಮೇಲೆ ಬಂದು ತುಸು ಸಮಯ ಆಚೀಚೆ ಅಡ್ಡಾಡಿದ್ದಾನೆ. ನಂತರ ಕೆಲವರು ನೋಡ ನೋಡುತ್ತಲೇ ಏಕಾಏಕಿ ಸೇತುವೆಯಿಂದ ನದಿಗೆ ಹಾರಿದ್ದಾನೆ.
ಇನ್ನು ಅಷ್ಟರಲ್ಲಿ ಇದನ್ನು ಗಮನಿಸಿದ ದೂರದ ನದಿಯ ದಡದಲ್ಲಿದ್ದ ಮೀನುಗಾರ ಖಾರ್ವಿ ಸಮಾಜದ ಯುವಕರು ಕೂಡಲೇ ದೋಣಿ ಮೂಲಕ ಸಾಗಿ ನೀರಿನಲ್ಲಿ ಅರೆ ಪ್ರಜ್ಞಾವಸ್ಥೆಯಲ್ಲಿ ಕೊಸರಾಡುತ್ತಿದ್ದವನ್ನು ಅನಾಮತ್ತಾಗಿ ಎತ್ತಿ ದಡಕ್ಕೆ ತಲುಪಿಸಿದ್ದಾರೆ.
ಯುವಕನನ್ನು ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಆತ್ಮಹತ್ಯೆಯ ನಿಗೂಢತೆ ಸಹಿತ ಯುವಕನ ಬಗ್ಗೆ ಹೆಚ್ಚಿನ ವಿವರಗಳು ತಿಳಿದು ಬಂದಿಲ್ಲ.