ಮಂಗಳೂರು, ಜ 04 (DaijiworldNews/PY): ರಾತ್ರಿ ವೇಳೆ ಅಕ್ರಮವಾಗಿ ಕಸ ಎಸೆಯುತ್ತಿದ್ದ ಗಾಡಿಗೆ 5000 ರೂ. ದಂಡ ವಿಧಿಸಿದ ಘಟನೆ ನಡೆದಿದೆ.
ಹಲವಾರು ದಿನಗಳಿಂದ ಬಂಗ್ರಕಾಳೂರು ಗೋಲ್ಡ್ ಫಿಂಚ್ ಮೈದಾನದ ಎದುರುಗಡೆ ಇರುವ ಸರಕಾರಿ ಖಾಲಿ ಜಾಗದಲ್ಲಿ ಲಾರಿ, ಟೆಂಪೋ, ಪಿಕಪ್ಗಳ ಮೂಲಕ ಕಸ ಹಾಗೂ ಇತರ ತ್ಯಾಜ್ಯಗಳನ್ನು ರಾತ್ರಿ ಎಸೆದು ಹೋಗುತ್ತಿದ್ದರಿ. ಈ ಬಗ್ಗೆ ಹಲವಾರು ಬಾರಿ ಮನಪಾ ಸದಸ್ಯರು ಹಾಗೂ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆ ಜಿಲ್ಲಾಧಿಕಾರಿ ಹಾಗೂ ಮನಪಾದ ಆಯುಕ್ತರು ಬಂದು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಭರವಸೆ ನೀಡಿದ್ದರು.
ಆದರೆ, ರಾತ್ರಿ ವೇಳೆ ಕದ್ದುಮುಚ್ಚಿ ಕಸ ಎಸೆದು ಹೋಗುವವರನ್ನು ತಡೆಯುವುದು ಕಷ್ಟ ಸಾಧ್ಯವಾಗಿತ್ತು. ಹಾಗಾಗಿ ಸ್ಥಳೀಯ ಮನಪಾ ಸದಸ್ಯರಾದ ಕಿರಣ್ ಕುಮಾರ್ ಕೋಡಿಕಲ್ ಹಾಗೂ ಸ್ಥಳೀಯ ನಾಗರಿಕರು ರಾತ್ರಿ ವೇಳೆ ಕಾದು ಕುಳಿತು ಕಸ ಎಸೆಯಲು ಬಂದ ಪಿಕಪ್ ಅನ್ನು ತಡೆದು ಆಯುಕ್ತರಿಗೆ ಮಾಹಿತಿ ನೀಡಿದ್ಧಾರೆ.
ಆಯುಕ್ತರು ಆರೋಗ್ಯಾಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ವಾಹನಕ್ಕೆ 5000 ರೂ ದಂಡವನ್ನು ವಿಧಿಸಿದ್ದು, ಇನ್ನೊಮ್ಮೆ ಈ ರೀತಿಯಾದ ಕೃತ್ಯದಲ್ಲಿ ಭಾಗಿಯಾಗಿರುವುದ ಕಂಡುಬಂದಲ್ಲಿ ವಾವನವನ್ನೇ ವಶಕ್ಕೆ ಪಡೆಯುವುದಾಗಿ ಎಚ್ಚರಿಕೆ ನೀಡಿದ್ಧಾರೆ.