ಕಾರ್ಕಳ, ಜ 04 (DaijiworldaNews/HR): ಪ್ರಗತಿ ಹೊಂದುತ್ತಿರುವ ಅಜೆಕಾರು ಹೋಬಳಿವು ಗ್ರಾಮೀಣ ಮಟ್ಟದಾಗಿದ್ದು, ರೈತಾಪಿ ಜನ ಕೃಷಿ ಜೊತೆ ಹೈನುಗಾರಿಕೆಯಲ್ಲಿ ಅವಲಂಬಿಸಿಕೊಂಡಿದ್ದಾರೆ. ಅದಕ್ಕೆ ಪೂರಕವಾಗಿ ಅಗತ್ಯವಾಗಿರ ಬೇಕಾದ ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ ಪೂರ್ಣ ಕಾಲಿಕ ವೈದ್ಯರೆ ಇಲ್ಲ.
1990 ರಲ್ಲಿ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರವಾಗಿ ಈ ಆಸ್ಪತ್ರೆ ಆರಂಭಗೊಂಡಿತು. 2000ನೇ ಸಾಲಿನಲ್ಲಿ ಪಶು ಚಿಕಿತ್ಸಾಲಯವಾಗಿ ಮೇಲ್ದರ್ಜೆಗೇರಿತು. ಈ ಸಂದರ್ಭ ಪಶು ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಸುತ್ತಿದ್ದ ವೈದ್ಯರು, ಅದ್ಯಾವುದೋ ಕಾರಣದಿಂದ ವರ್ಗಾವಣೆಗೊಂಡ ನಂತರ ಈ ಪಶು ಆಸ್ಪತ್ರೆಗೆ ಪೂರ್ಣ ಕಾಲಿಕ ವೈದ್ಯರ ನೇಮಕಾತಿಯಾಗಿಲ್ಲ. ಆದರೆ 2012ನೇ ಇಸವಿಯಲ್ಲಿ ಹೊಬಳಿ ಮಟ್ಟದ ಪಶು ವೈದ್ಯಕೀಯ ಆಸ್ಪತ್ರೆ ಆಗಿ ಮೇಲ್ದರ್ಜೆಗೇರಿದೆ ಆದರೂ ಅಧಿಕಾರಿಗಳ ನೇಮಕ ಮಾತ್ರ ಇದುವರೆಗೆ ನೇಮಕ ಮಾಡಿಲ್ಲ.
ಇನ್ನು ಹೆಸರಿಗಷ್ಟೇ ಉತ್ತುಂಗಕ್ಕೇರಿದ ಆಸ್ಪತ್ರೆ ಪಶು ವೈದ್ಯಕೀಯ ಆಸ್ಪತ್ರೆ ಮೇಲ್ದರ್ಜೆಗೇರಿದೆ ಎಂದರೆ ಅಲ್ಲಿ ತೆರವು ಗೊಂಡಿರುವ ಹುದ್ದೆಗಳು ಭರ್ತಿಗೊಳ್ಳಬೇಕು. ಖಾಯಂ ಸಿಬ್ಬಂದಿಗಳ ನೇಮಕವಾಗದಿರುವ ಇದೇ ಆಸ್ಪತ್ರೆಯಲ್ಲಿ ಪ್ರಭಾರ ವೈದ್ಯಾಧಿಕಾರಿಯೇ ಕೆಲದಿನಗಳಿಗೆ ಮಾತ್ರ ಕಾರ್ಯನಿರ್ವಹಿಸುತ್ತಾರೆ.
ಅಜೆಕಾರು ಹೊಬಳಿ ಮಟ್ಟದ ಪಶು ವೈದ್ಯಕೀಯ ಆಸ್ಪತ್ರೆಯ ವ್ಯಾಪ್ತಿಯಲ್ಲಿ ಮರ್ಣೆ, ಕಡ್ತಲ, ಶಿರ್ಲಾಲು, ಕೆರ್ವಾಶೆಗ್ರಾಮ ಪಂಚಾಯತ್ ಇದ್ದು 8 ಕಂದಾಯ ಗ್ರಾಮಗಳನ್ನುಒಳಗೊಂಡಿದೆ. ಸುಮಾರು 9500 ಸಾಕು ಪ್ರಾಣಿಗಳಿದ್ದು 9 ಹಾಲು ಉತ್ಪಾದಕರ ಸಹಕಾರಿ ಸಂಘಗಳಿವೆ.
ಈ ಭಾಗದ ಜನತೆ ತಮ್ಮ ರಾಸುಗಳು ಸೇರಿದಂತೆ ಸಾಕು ಪ್ರಾಣಿಗಳಿಗೆ ಆರೋಗ್ಯ ಸಮಸ್ಯೆಯಾದಾಗ ಸಂಕಷ್ಟ ಪಡಬೇಕಾಗಿದೆ. ತುರ್ತುಚಿಕಿತ್ಸೆ ಸಿಗದೆ ಪ್ರಾಣಿಗಳು ಸಾವನೊಪ್ಪಿರುವ ಅದೆಷ್ಟೋ ಘಟನಾವಳಿ ಇದೇ ಪರಿಸರದಲ್ಲಿ ನಡೆದಿದೆ. ಆ ಮೂಲಕ ಹೈನುಗಾರರು ನಷ್ಟ ಅನುಭವಿಸುತ್ತಾ ಬಂದಿದ್ದಾರೆ. ತೆರವುಗೊಂಡಿರುವ ಹುದ್ದೆಗಳು ಡಿ ದರ್ಜೆ ನೌಕರ 2 ಹುದ್ದೆಗಳಿದ್ದು ಇದರಲ್ಲಿ ಓರ್ವ ಮಾತ್ರ ಹೊರಗುತ್ತಿಗೆ ಆದರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಉಳಿದಂತೆ ಅಜೆಕಾರು ಹೊಬಳಿ ಮಟ್ಟದ ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ ಮುಖ್ಯ ಪಶು ವೈದ್ಯಾಧಿಕಾರಿ-1, ಜಾನುವಾರು ಅಧಿಕಾರಿ -1 ಸೇರಿದಂತೆ ಎಲ್ಲಾ ಹುದ್ದೆಗಳು ಖಾಲಿಯಾಗಿ ಉಳಿದಿವೆ.
ಅಜೆಕಾರು ಮಾತ್ರ ಸೀಮಿತವಾಗದೆ ಕಾರ್ಕಳ ತಾಲೂಕಿನ ಬಜಗೋಳಿ, ನಿಟ್ಟೆ, ಪಳ್ಳಿ, ಕಲ್ಯಾ, ಬೈಲೂರು, ಬೋಳ, ಬೆಳ್ಮಣ್, ಸಾಣೂರು, ಇರ್ವತ್ತೂರು, ಹೊಸ್ಮಾರ್, ಮಾಳ, ನಕ್ರೆ, ಮುಂಡ್ಕೂರು ಪಶು ಚಿಕಿತ್ಸಾ ಕೇಂದ್ರಗಳಲ್ಲಿಯೂ ಸಿಬಂದಿ ಕೊರತೆ ಇದೆ. ಹೆಬ್ರಿ ತಾಲೂಕಿನ ಮುನಿಯಾಲು, ಶಿವಪುರ, ಮುದ್ರಾಡಿ, ಕಬ್ಬಿನಾಲೆ, ನಾಡ್ಪಾಲು ಕೇಂದ್ರಗಳಲ್ಲಿಯೂ ಸಿಬಂದಿ ಕೊರತೆ ಇದೆ.
ತಾಲೂಕು ಪಶು ಆಸ್ಪತ್ರೆ ಸಹಿತ ಗ್ರಾಮೀಣ ಭಾಗದ ಪ್ರಾಥಮಿಕ ಪಶು ಆಸ್ಪತ್ರೆಗಳಲ್ಲಿ ಒಟ್ಟು 57 ಹುದ್ದೆಗಳಿದ್ದು ಇದರಲ್ಲಿ ಕೇವಲ 12 ಹುದ್ದೆಗಳಲ್ಲಿ ಮಾತ್ರ ಅಧಿಕಾರಿಗಳು, ಸಿಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಉಳಿದ 45 ಹುದ್ದೆಗಳು ಕಾರ್ಕಳ ತಾಲೂಕಿನ ಪಶು ಆಸ್ಪತ್ರೆಗಳಲ್ಲಿ ಖಾಲಿಯಾಗಿ ಉಳಿದಿದೆ. ತಾಲೂಕಿನ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೇವಲ 12 ಅಧಿಕಾರಿಗಳು ಮತ್ತು ಸಿಬಂದಿ ಎಲ್ಲಾ 57 ಹುದ್ದೆಗಳ ಕಾರ್ಯನಿರ್ವಹಿಸಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ. ಕಾರ್ಯಕ್ಷೇತ್ರ ಮೀರಿ ಕರ್ತವ್ಯ ನಿರ್ವಹಣೆ ಕಾರ್ಕಳ ತಾಲೂಕಿನಲ್ಲಿ ಸುಮಾರು 54 ಸಾವಿರ ಜಾನುವಾರುಗಳಿವೆ. ಒಂದು ವೈದ್ಯರಿಗೆ ಸುಮಾರು 4-5 ಪಂಚಾಯತ್ ವ್ಯಾಪ್ತಿ ಇರುವುದರಿಂದ ಜಾನುವಾರುಗಳಿಗೆ ತುರ್ತು ಸಂದರ್ಭದಲ್ಲಿ ಸಮರ್ಪಕವಾಗಿ ಚಿಕಿತ್ಸೆ ದೊರಕುವುದು ಕಷ್ಟ ಸಾಧ್ಯವಾಗಿದೆ. ಗ್ರಾಮೀಣ ಭಾಗದಲ್ಲಿ ಹೈನುಗಾರರು ಹೆಚ್ಚಾಗುತ್ತಿರುವುದರಿಂದ ಪಶು ವೈಧ್ಯರ ನೇಮಕ ಶೀಘ್ರವಾಗಿ ನಡೆಯ ಬೇಕಾಗಿದೆ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಇನ್ನು ಪಶುಗಳನ್ನೇ ನಂಬಿಕೊಂಡಿರುವ ಹೈನುಗಾರರು ತಾಲೂಕು ವ್ಯಾಪ್ತಿಯಲ್ಲಿ ಬಹಳ ಸಂಖ್ಯೆಯಲ್ಲಿದ್ದಾರೆ. ಪಶುಗಳ ಆರೋಗ್ಯದಲ್ಲಿ ವ್ಯತಿರಿಕ್ತವಾದಾಗ ಅಗತ್ಯ ಚಿಕಿತ್ಸೆ ಪಡೆಯಲು ಪಶು ವೈದ್ಯರೇ ಆಸ್ಪತ್ರೆಯಲ್ಲಿ ಇರುವುದಿಲ್ಲ. ಇದರಿಂದ ಹೈನುಗಾರಿಯಲ್ಲಿ ಬಹಳ ಸಂಕಷ್ಟ ಅನುಭವಿಸಬೇಕಾಗುತ್ತದೆ. ಪೂರ್ಣ ಕಾಲಿಕ ವೈದ್ಯರು ಸಹಿತ ,ಸಿಬ್ಬಂದಿಗಳ ನೇಮಕಾತಿಯು ತ್ವರಿತವಾಗಿ ನಡೆಯಬೇಕಾಗಿದೆ ಎಂದು ಕಮಲಾಕ್ಷ ನಾಯಕ್ ಶಿರ್ಲಾಲು ಹೇಳಿದ್ದಾರೆ.