ಸುಳ್ಯ, ಜ 04 (DaijiworldNews/PY): ಮಾನವೀಯತೆ ಹಾಗೂ ಸಮಾಜದಲ್ಲಿ ಹಿಂದುಳಿದವರ ಪರ ಕಾಳಜಿ ತೋರುವ ಮಾದರಿ ಕಾರ್ಯದಲ್ಲಿ ಮುಸ್ಲಿಂ ಉದ್ಯಮಿಯೊಬ್ಬರು ತನ್ನ ಮಗಳ ವಿವಾಹದ ಸಂದರ್ಭದಲ್ಲಿಯೇ ತಮ್ಮ ಗ್ರಾಮದ ಬಡ ಕುಟುಂಬದ ಇಬ್ಬರು ಹೆಣ್ಣು ಮಕ್ಕಳಿಗೆ ವಿವಾಹ ಮಾಡಿಸಿ ಇತರರಿಗೂ ಮಾದರಿಯಾಗಿರುವ ಘಟನೆ ಸುಳ್ಯದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಬೆಳ್ಳಾರೆಯ ಪ್ರಗತಿ ಎಂಟರ್ಪ್ರೈಸಸ್ನ ಮಾಲೀಕ ಅಬ್ದುಲ್ ಖಾದರ್ ಹಾಜಿ ಬಾಯಂಬಾಡಿ ಆರ್ಥಿಕವಾಗಿ ಬಡ ಕುಟುಂಬಕ್ಕೆ ಸೇರಿದ ಇಬ್ಬರು ಹೆಣ್ಣುಮಕ್ಕಳ ವಿವಾಹದ ವೆಚ್ಚವನ್ನು ಭರಿಸಿದ್ದು, ತನ್ನ ಮಗಳು ಮಿಸ್ಬಾಳ ವಿವಾಹದ ದಿನದಂದು ಎರಡು ಹೆಣ್ಣು ಮಕ್ಕಳ ವಿವಾಹ ಮಾಡಿಸಿದ್ದಾರೆ.
ಬೆಳ್ಳಾರೆಯ ಶಂಸುಲ್ ಉಲೈಮಾ ಚಾರಿಟೇಬಲ್ ಟ್ರಸ್ಟ್ ಮತ್ತು ಎಸ್ಕೆಎಸ್ಎಸ್ಎಫ್ ಸಂಸ್ಥೆಯು ಸಾಮೂಹಿಕ ವಿವಾಹ ಮತ್ತು ಸನ್ಮಾನ ಕಾರ್ಯಕ್ರಮವನ್ನು ಕೈಗೊಂಡಿತ್ತು.
ಈ ಸಂದರ್ಭದಲ್ಲಿ ಅಕ್ಷರ ಸಂತ ಹರೇಕಳ ಹಾಜಬ್ಬ ಅವರನ್ನು ಸನ್ಮಾನಿಸಲಾಯಿತು. ಝೈನುಲ್ ಅಬ್ದೀನ್ ತಂಗಳ್ ದುಗಲಡ್ಕ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು.