ಸುಳ್ಯ, ಜ 04 (DaijiworldNews/MS): ಕೆಎಸ್ಆರ್ಟಿಸಿ ಬಸ್ ಚಿಲ್ಲರೆ ವಾಪಸ್ ನೀಡಲು ವಿಳಂಬ ಮಾಡಿದ ಕಾರಣಕ್ಕೆ ಬಸ್ಸಿನ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ ಪ್ರಯಾಣಿಕನ ವಿರುದ್ದ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾಂದರ್ಭಿಕ ಚಿತ್ರ
ಸುಳ್ಯದಿಂದ ಬೆಳ್ಳಾರೆ ಕಡೆಗೆ ಸಂಚರಿಸುವ ಬಸ್ ಗೆ ಐವರ್ನಾಡು ಎಂಬಲ್ಲಿ ಹತ್ತಿದ ಪುರುಷೋತ್ತಮ ಎಂಬವರು ಕೆಎಸ್ಆರ್ಟಿಸಿ ಬಸ್ನ ಕಂಡಕ್ಟರ್ಗೆ ಟಿಕೆಟ್ ಶುಲ್ಕವಾಗಿ ನೂರು ರೂಪಾಯಿ ನೋಟು ನೀಡಿದ್ದರು ಎನ್ನಲಾಗಿದೆ.
ಕಂಡಕ್ಟರ್ ವಸಂತ ಕೆ. ಆರ್. ಅವರು ಟಿಕೆಟ್ ಹಿಂದೆ 90 ರೂ. ಎಂದು ಬರೆದು ನಂತರ ಹಿಂದಿರುಗಿಸುವುದಾಗಿ ಪ್ರಯಾಣಿಕರಿಗೆ ತಿಳಿಸಿದ್ದರು. ಬಸ್ ಬೆಳ್ಳಾರೆ ತಲುಪಿದಾಗ ಪುರುಷೋತ್ತಮ್ ಅವರು ಕಂಡಕ್ಟರ್ ಬಳಿ ತಮ್ಮ 90 ರೂಪಾಯಿ ಚೇಂಜ್ ವಾಪಸ್ ಕೊಡುವಂತೆ ಕೇಳಿದಾಗ ಕಂಡಕ್ಟರ್ ಬಸ್ ನಿಂದ ಇಳಿದು ಪಕ್ಕದ ಅಂಗಡಿಗೆ ಚಿಲ್ಲರೆ ತರಲು ಹೋಗಿದ್ದರು.
ನಿರ್ವಾಹಕ ಅಂಗಡಿಯಲ್ಲಿ ಚಿಲ್ಲರೆ ಪಡೆದು ಬರುವಾಗ ತಡವಾಗಿದ್ದು ಇದೇ ಕಾರಣಕ್ಕೆ ಪುತ್ತೂರಿಗೆ ತೆರಳುತ್ತಿದ್ದ ಬಸ್ ಪ್ರಯಾಣಿಕ ಪುರುಷೋತ್ತಮ ತಪ್ಪಿಹೋಗಿದೆ.ಇದರಿಂದ ಸಿಟ್ಟಿಗೆದ್ದ ಅವರು ಕಂಡಕ್ಟರ್ ಜೊತೆ ಮಾತಿನ ಚಕಮಕಿ ನಡೆಸಿ, ಕೊನೆಗೆ ಮಾತಿಗೆ ಬೆಳೆದು ಹಲ್ಲೆ ನಡೆಸಿದ್ದಾರೆನ್ನಲಾಗಿದೆ. ಈ ಬಗ್ಗೆ ಕಂಡಕ್ಟರ್ ಪ್ರಯಾಣಿಕ ಪುರುಷೋತ್ತಮ ವಿರುದ್ಧ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.