ಮಂಗಳೂರು, ಜ 03 (DaijiworldNews/MS): ಉಳ್ಳಾಲ ಕ್ಷೇತ್ರದ ಮಾಜಿ ಶಾಸಕ ಬಿ.ಎ. ಇದಿನಬ್ಬ ಅವರ ಪುತ್ರನ ಮನೆ ಮೇಲೆ ಡಿ.03 ರ ಸೋಮವಾರ ಬೆಳಗ್ಗೆ ರಾಷ್ಟ್ರೀಯ ತನಿಖಾ ದಳ(ಎನ್ ಐಎ)ದ ಅಧಿಕಾರಿಗಳ ತಂಡ ಮತ್ತೆ ದಾಳಿ ನಡೆಸಿದ್ದು, ಮಾಜಿ ಶಾಸಕ ದಿ.ಇದಿನಬ್ಬ ಪುತ್ರ ಬಿ.ಎಂ.ಭಾಷಾ ಸೊಸೆ ದೀಪ್ತಿ ಆಲಿಯಾಸ್ ಮರಿಯಂ ಎನ್ ಐಎ ವಶಕ್ಕೆ ಪಡೆದಿದೆ. ಐಸಿಎಸ್ ಜೊತೆ ನಂಟಿನ ಆರೋಪದ ಹಿನ್ನೆಲೆಯಲ್ಲಿ ಮರಿಯಂ ಬಂಧನವಾಗಿದೆ.
ಉಳ್ಳಾಲದ ಮಾಸ್ತಿಕಟ್ಟೆಯ ಮನೆ ಮೇಲೆ ದಾಳಿ ನಡೆಸಿದ ಎನ್ ಐಎ ಅಧಿಕಾರಿಗಳು ಮರಿಯಂ ಅವರನ್ನು ವಶಕ್ಕೆ ಪಡೆದು ಟೆಂಪೋ ಟ್ರಾವೆಲರ್ ವಾಹನದಲ್ಲಿ ಕರೆದೊಯ್ದಿದ್ದಾರೆ. ಮರಿಯಂ ಅವರ ಆರೋಗ್ಯ ತಪಾಸಣೆಯನ್ನು ನಗರದ ವೆನ್ ಲಾಕ್ ಜಿಲ್ಲಾಸ್ಪತ್ರೆಯಲ್ಲಿ ನಡೆಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿ ಆ ಬಳಿಕ ಎನ್ ಐಎ ಅಧಿಕಾರಿಗಳು ನೇರವಾಗಿ ದೆಹಲಿಗೆ ಕರೆದೊಯ್ದಿವ ಬಗ್ಗೆ ಸಾಧ್ಯತೆ ಇದೆ.
ಎನ್ಐಎ ಸಹಾಯಕ ತನಿಖಾಧಿಕಾರಿ ಕ್ರಿಶ ಕುಮಾರ್ (ಡಿಎಸ್ಪಿ) ಅವರ ನೇತೃತ್ವದ ಅಜಯ್ ಸಿಂಗ್ ಪಿಐ, ಮೋನಿಕಾ ಧಿಕ್ವಾಲ್ ಮತ್ತಿತರ ಎನ್ ಐಎ ಅಧಿಕಾರಿಗಳ ತಂಡ ದಾಳಿ ನಡೆಸಿದೆ.
ಎನ್ ಐಎ ಅಧಿಕಾರಿಗಳು ಮಾಜಿ ಶಾಸಕ ಬಿ.ಎ. ಇದಿನಬ್ಬ ಅವರ ಪುತ್ರನ ಮನೆಗೆ ಮನೆ ಮೇಲೆ ಕಳೆದ ಅಗಸ್ಟ್ 4ರಂದು ದಾಳಿ ನಡೆಸಿದ್ದು, ಎರಡು ದಿನಗಳ ದಾಳಿಯ ಬಳಿಕ ಬಾಷಾ ಕಿರಿಯ ಪುತ್ರ ಅಬ್ದುಲ್ ರೆಹಮಾನ್ ಅವರನ್ನು ಬಂಧಿಸಿತ್ತು. ಈ ವೇಳೆ ಬಾಷಾರ ಮತ್ತೊಬ್ಬ ಪುತ್ರ ಅನಾಸ್ ಪತ್ನಿ ದೀಪ್ತಿ ಆಲಿಯಾಸ್ ಮರಿಯಂ ಮೇಲೆ ಅನುಮಾನವಿದ್ದು,ಆಕೆಗೆ ಮಗುವಿದ್ದ ಕಾರಣ ಕೇವಲ ವಿಚಾರಣೆ ನಡೆಸಿಬಿಟ್ಟಿದ್ದರು. ಇದೀಗ ಮತ್ತೆ ದಾಳಿ ನಡೆಸಿದ ತಂದ ಮರಿಯಂಳನ್ನು ಬಂಧಿಸಿದೆ.