ಉಡುಪಿ, ಜ 03 (DaijiworldNews/HR): 15 ರಿಂದ18 ವರ್ಷದೊಳಗಿನ ಮಕ್ಕಳ ಕೊರೊನಾ ಲಸಿಕೆ ಅಭಿಯಾನಕ್ಕೆ ಶಾಸಕ ರಘುಪತಿ ಭಟ್ ಅವರು ನಿಟ್ಟೂರು ಪ್ರೌಢಶಾಲೆಯಲ್ಲಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, "ನಾವೆಲ್ಲರೂ ಕಳೆದೆರಡು ವರ್ಷಗಳಿಂದ ಕೊರೊನಾದಿಂದ ಬಳಲುತ್ತಿದ್ದೇವೆ, 2020 ರಿಂದ, ವೈರಸ್ ವಿಭಿನ್ನ ರೂಪಗಳನ್ನು ತಾಳುತ್ತಿದ್ದು, ಆದರೆ ಭಾರತವು ಅದರ ವಿರುದ್ಧ ಬಲವಾಗಿ ನಿಂತಿದ್ದು, ಪ್ರತಿಯೊಬ್ಬರೂ ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಮತ್ತು ಲಸಿಕೆಗಳನ್ನು ತೆಗೆದುಕೊಂಡಾಗ ಮಾತ್ರ ಸೋಂಕಿನಿಂದನಿಂದ ನಮ್ಮನ್ನು ರಕ್ಷಿಸಲು ಸಾಧ್ಯ" ಎಂದರು.
ಇನ್ನು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಲಸಿಕೆ ಅಭಿಯಾನದಲ್ಲಿ ಒಂದು ಹೆಜ್ಜೆ ಮುಂದಿಟ್ಟಿದ್ದು, ಇತರ ಮುಂದುವರಿದ ದೇಶಗಳಿಗೆ ಹೋಲಿಸಿದರೆ ದೇಶದಲ್ಲಿ ಮರಣ ಪ್ರಮಾಣವು ತುಂಬಾ ಕಡಿಮೆಯಾಗಿದೆ. ಇದಕ್ಕೆ ನಾವೆಲ್ಲರೂ ನಮ್ಮ ವಿಜ್ಞಾನಿಗಳಿಗೆ ಕೃತಜ್ಞರಾಗಿರಬೇಕು" ಎಂದಿದ್ದಾರೆ.
ಜಿಲ್ಲಾಧಿಕಾರಿ ಕೂರ್ಮಾರಾವ್ ಮಾತನಾಡಿ, "ಶೇ.100ರಷ್ಟು ಲಸಿಕೆ ಹಾಕಲು ಸಾರ್ವಜನಿಕರ ಸಹಕಾರ ಅತೀ ಮುಖ್ಯ, ಜಿಲ್ಲೆಯು ಮೊದಲ ಡೋಸ್ನಲ್ಲಿ ಶೇ. 96.29 ಮತ್ತು ಎರಡನೇ ಡೋಸ್ನಲ್ಲಿ ಶೇ. 84.14 ಸಾಧಿಸಿದೆ. ಕೋವಿಡ್ ಪಂಚಸೂತ್ರಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಲಸಿಕೆ ತೆಗೆದುಕೊಳ್ಳುವುದನ್ನು ಜನರು ತಪ್ಪದೇ ಕಟ್ಟುನಿಟ್ಟಾಗಿ ಅನುಸರಿಸಿದರೆ, ನಾವು ಯಶಸ್ವಿಯಾಗಬಹುದು" ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಪಂಚಾಯತ್ ನ ಸಿಇಒ ಡಾ.ನವೀನ್ ಭಟ್ ವೈ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಲ್ಲೇಶಪ್ಪ, ಪಿಯು ಶಿಕ್ಷಣ ಇಲಾಖೆ ಉಪನಿರ್ದೇಶಕ ಮಾರುತಿ, ಸುಬ್ರಹ್ಮಣ್ಯ ಶೇರಿಗಾರ್, ನಿಟ್ಟೂರು ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಅನುಸೂಯಾ, ಕರಂಬಳ್ಳಿ, ಗಿರಿಧರ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.