ಸುಬ್ರಹ್ಮಣ್ಯ, ಜ 03 (DaijiworldNews/MS): ಮೇಕೆದಾಟು ವಿಚಾರದಲ್ಲಿ ಕಾಂಗ್ರೆಸ್ ಪಾದಯಾತ್ರೆ ವಿಚಾರ ಹಾಸ್ಯಾಸ್ಪದ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಸುನಿಲ್ ಕುಮಾರ್ ವ್ಯಂಗ್ಯವಾಡಿದ್ದಾರೆ.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಲೆಂದು ಭಾನುವಾರ ಸಂಜೆ ಆಗಮಿಸಿ ಖಾಸಗಿ ವಸತಿಗೃಹದಲ್ಲಿ ವಾಸ್ತವ್ಯ ಹೂಡಿ, ಜ.3 ರ ಇಂದು ದೇವರ ದರ್ಶನ ಪಡೆದು ಆಶ್ಲೇಷ ಬಲಿ ಪೂಜೆ ನೆರವೇರಿಸಿದರು.
ಈ ವೇಳೆ ಮಾಧ್ಯಮದೊಂದಿಗೆ ಮೇಕೆದಾಟು ವಿಚಾರದಲ್ಲಿ ಕಾಂಗ್ರೆಸ್ ಪಾದಯಾತ್ರೆ ವಿಚಾರವಾಗಿ ಮಾತನಾಡಿದ ಅವರು, " ಮೇಕೆದಾಟು ವಿಚಾರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದ ಸಂದರ್ಭ ಕ್ರಮ ಕೈಗೊಂಡಿಲ್ಲ, ಕೇವಲ ಡಿಪಿಆರ್ ಸಿದ್ಧಪಡಿಸಲು 5 ವರ್ಷ ತೆಗೆದುಕೊಂಡಿದೆ. ತಮಿಳುನಾಡಿಗೆ ನಮ್ಮ ರಾಜ್ಯದ ಸ್ಪಷ್ಟ ನಿಲುವು ತಿಳಿಸುವಲ್ಲಿ ವಿಫಲವಾಗಿದೆ "ಎಂದು ಆರೋಪಿಸಿದರು.
"ಕಾಂಗ್ರೆಸ್ ಗೆ ಜನರ, ರೈತರ ನೀರಾವರಿ ಸಮಸ್ಯೆ ಬಗ್ಗೆ ಕಾಳಜಿಯಿಲ್ಲ, ಕೈ ಪಕ್ಷಕ್ಕೆ ಬೇಕಾಗಿರುವುದು ಕೇವಲ ಸ್ವಹಿತಾಸಕ್ತಿ ಮಾತ್ರ. ಆದರೆ ಬಿಜೆಪಿ ಸರಕಾರ ಮೇಕೆದಾಟು ಯೋಜನೆಯ ಜಾರಿಗೆ ಬದ್ಧವಾಗಿದೆ" ಎಂದು ಸ್ಪಷ್ಟಪಡಿಸಿದರು.
ಸಚಿವರು ದೇವರ ದರ್ಶನ ಪಡೆದ ಬಳಿಕ ಬಳಿಕ ಶ್ರೀ ಸಂಪುಟ ನರಸಿಂಹ ಮಠದ ಯತಿವರ್ಯ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥರಿಂದ ನರಸಿಂಹ ದೇವರ ಎದುರು ಭಾಗ ಪ್ರಸಾದ ಸ್ವೀಕರಿಸಿದರು.ತದನಂತರ ಹೊಸಳಿಗಮ್ಮ ದೈವಸ್ಥಾನದ ಬಳಿ ಪ್ರಸಾದ ಸ್ವೀಕರಿಸಿದರು.ಈ ಸಂದರ್ಭ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.