ಮಂಗಳೂರು, ಜ 03 (DaijiworldNews/PY): ಕೋಟತಟ್ಟು ಕೊರಗರ ಮೇಲಿನ ಪೊಲೀಸ್ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಸಿಒಡಿ ತನಿಖೆಗೆ ಸಂಸದ ಯು ಟಿ ಖಾದರ್ ವಿರೋಧ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಕೊರಗರ ಮೇಲಿನ ಪೊಲೀಸ್ ದೌರ್ಜನ್ಯ ಪ್ರಕರಣದ ತನಿಖೆಯನ್ನು ಹಾಲಿ ಇಲ್ಲವೇ, ನಿವೃತ್ತ ನ್ಯಾಯಾಧೀಶರು ನಡೆಸಬೇಕು. ಸಿಒಡಿ ತನಿಖೆಯಿಂದ ನ್ಯಾಯ ನಿರೀಕ್ಷಿಸುವಂತಿಲ್ಲ" ಎಂದಿದ್ದಾರೆ.
"ಸಿಒಡಿ ತನಿಖೆ ಎನ್ನುವುದು ಕಣ್ಣೀರು ಒರೆಸುವ ತಂತ್ರ. ಇದು ಜನರನ್ನು ಮೂರ್ಖರನ್ನಾಗಿಸುವ ಕೆಲಸ. ಪೊಲೀಸರಿಂದಾದ ದೌರ್ಜನ್ಯವನ್ನು ಪೊಲೀಸರಿಂದ ತನಿಖೆ ನಡೆಸಿದರೆ ನ್ಯಾಯ ಸಿಗಲು ಸಾಧ್ಯವೆ?. ಸಿಒಡಿ ತನಿಖೆಯನ್ನು ನಾವ್ಯಾರೂ ಒಪ್ಪುವುದಿಲ್ಲ" ಎಂದು ಹೇಳಿದ್ದಾರೆ.
"ಪ್ರಕರಣದ ಸಂಬಂಧ ಒಬ್ಬೊಬ್ಬ ಸಚಿವರು ಒಂದೊಂದು ಹೇಳಿಕೆ ನೀಡುತ್ತಿದ್ದಾರೆ. ಗೃಹ ಸಚಿವರೇ ಪೊಲೀಸರಿಂದ ತಪ್ಪಾಗಿದೆ ಎನ್ನುತ್ತಿದ್ದಾರೆ. ಇವರದ್ದೇ ಇಲಾಖೆ, ಇವರೇ ತಪ್ಪಾಗಿದೆ ಎನ್ನುತ್ತಿದ್ದಾರೆ. ತಪ್ಪಾಗಿದ್ದಕ್ಕೆ ಏನು ಪರಿಹಾರ ಕೊಡುತ್ತೀರಿ ಎನ್ನುವುದನ್ನು ಹೇಳಲಿ. ಇದೇ ಘಟನೆ ಬೇರೆ ಜಿಲ್ಲೆಯಲ್ಲಿ ಆಗುತ್ತಿದ್ದರೆ ಸರ್ಕಾರದ ಪರಿಸ್ಥಿತಿ ಏನಾಗುತ್ತಿತ್ತು?" ಎಂದು ಪ್ರಶ್ನಿಸಿದ್ದಾರೆ.