ಮಂಗಳೂರು, ಜ 03 (DaijiworldNews/HR): ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಸಾರ್ವಜನಿಕರ ಸಂಯುಕ್ತಾಶ್ರಯದಲ್ಲಿ ಜ.3ರಂದು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ನೀಡುವ ಕೋವಾಕ್ಸಿನ್ ಲಸಿಕಾ ಅಭಿಯಾನಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್ ಚಾಲನೆ ನೀಡಿದ್ದಾರೆ.
ಬಳಿಕ ಮಾತನಾಡಿದ ಸಂಸದ ಕಟೀಲ್, "140 ಕೋಟಿ ಲಸಿಕೆಯನ್ನು ಪೂರ್ಣಗೊಳಿಸಿದ ಏಕೈಕ ರಾಷ್ಟ್ರ ಭಾರತ. ಕೊರೊನಾ ದೇಶವನ್ನು ಅಪ್ಪಳಿಸಿದಾಗ ಯಾರಿಗೂ ಅದರ ಬಗ್ಗೆ ತಿಳಿದಿರಲಿಲ್ಲ. ಕೊರೊನಾ ಹೆಚ್ಚಾದ ಬಳಿಕ ಸಾರ್ವಜನಿಕರ ರಕ್ಷಣೆಗಾಗಿ ಪ್ರಧಾನಿ ನರೇಂದ್ರ ಮೋದಿಯವರು ಲಾಕ್ಡೌನ್ ಜಾರಿಗೊಳಿಸಿದ್ದು, ಇಡೀ ರಾಷ್ಟ್ರವು ಕೋವಿಡ್ ಅನ್ನು ನಿಭಾಯಿಸಲು ಕೈಜೋಡಿಸಿತು. ಇಂದು ನಾವು ಹಾಸಿಗೆ, ವೆಂಟಿಲೇಟರ್ ಮತ್ತು ಆಮ್ಲಜನಕ ಘಟಕದ ಯಾವುದೇ ಕೊರತೆಯನ್ನು ಎದುರಿಸುವುದಿಲ್ಲ. ವೆನ್ಲಾಕ್ನಲ್ಲಿ103 ವೆಂಟಿಲೇಟರ್ಗಳಿದ್ದು, ಜಿಲ್ಲೆಯಲ್ಲಿ ಸುಮಾರು 14 ಲಕ್ಷ ಜನರು ಎರಡು ಡೋಸ್ ಲಸಿಕೆ ಹಾಕಿಸಿಕೊಂಡಿದ್ದಾರೆ. ಸುಮಾರು ಒಂದು ಲಕ್ಷ ಜನರು ಲಸಿಕೆಯನ್ನು ಹಾಕಿಲ್ಲ, ಅಂತವರು ಆದಷ್ಟು ಬೇಗ ಲಸಿಕೆ ಹಾಕಿಸಿಕೊಳ್ಳಲು ಮನವಿ ಮಾಡಿಕೊಳ್ಳುತ್ತೇನೆ" ಎಂದರು.
ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮಾತನಾಡಿ, "ಜಿಲ್ಲೆಯಲ್ಲಿ ಇನ್ನೂ ಒಂದು ಲಕ್ಷ ಜನರು ಲಸಿಕೆ ಹಾಕದಿರುವುದು ಜಿಲ್ಲೆಯಲ್ಲಿ ಪ್ರಮುಖ ಆತಂಕವಾಗಿದೆ. 16 ಲಕ್ಷ ಜನರು ಮೊದಲ ಡೋಸ್ ಕೊರೊನಾ ಲಸಿಕೆ ಹಾಗೂ 80% ಜನರು ಎರಡನೇ ಡೋಸ್ ಹಾಕಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ 7 ಓಮಿಕ್ರಾನ್ ಪ್ರಕರಣಗಳು ಸೌಮ್ಯವಾದ ರೋಗಲಕ್ಷಣಗಳೊಂದಿಗೆ ಇದ್ದು, ಇದು ವೇಗವಾಗಿ ಹರಡುತ್ತದೆ. ಇಂದಿನವರೆಗೂ ನಾವು ಲಸಿಕೆಯಿಂದ ಯಾವುದೇ ಅಡ್ಡ ಪರಿಣಾಮಗಳನ್ನು ಕಂಡಿಲ್ಲ. ಮುಂಬರುವ ದಿನಗಳಲ್ಲಿ ನಾವು ಕೊರೊನಾ ಪರೀಕ್ಷೆ ಮತ್ತು ವ್ಯಾಕ್ಸಿನೇಷನ್ ಡ್ರೈವ್ಗಳನ್ನು ನಡೆಸುತ್ತೇವೆ ಇದಕ್ಕಾಗಿ ಸಾರ್ವಜನಿಕ ಬೆಂಬಲ ಬೇಕಾಗಿದೆ" ಎಂದಿದ್ದಾರೆ.
ಇನ್ನು ಮೂರನೇ ಡೋಸ್ಗಳಿಗಾಗಿ ನಾವು ಜನವರಿ 10 ರಂದು ಮಾರ್ಗಸೂಚಿಗಳನ್ನು ಸ್ವೀಕರಿಸುವ ನಿರೀಕ್ಷೆಯಿದ್ದು, ಮಾಲ್, ಅಂಗಡಿಗಳು ಗ್ರಾಹಕರ ವ್ಯಾಕ್ಸಿನೇಷನ್ ಪ್ರಮಾಣಪತ್ರಗಳನ್ನು ಪರಿಶೀಲಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು" ಎಂದು ಹೇಳಿದ್ದಾರೆ.
ಈ ಸಂಧರ್ಭದಲ್ಲಿ ಶಾಸಕ ವೇದವ್ಯಾಸ್ ಕಾಮತ್, ಮೇಯರ್ ಪ್ರೇಮಾನಂದ ಶೆಟ್ಟಿ, ಡಿಎಚ್ಒ ಡಾ.ಕಿಶೋರ್ ಕುಮಾರ್, ಕಾರ್ಪೊರೇಟರ್ ಪೂರ್ಣಿಮಾ, ಜೀನತ್ ಮತ್ತಿತರರು ಉಪಸ್ಥಿತರಿದ್ದರು.