ಕಾರ್ಕಳ, ಜ 03 (DaijiworldNews/MS): ಕಾಲೇಜಿನಲ್ಲಿ ಮನೆಗೆ ಹಿಂತಿರುಗುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಚಾಲಕನ ನಿರ್ಲಕ್ಷ್ಯದಿಂದಾಗಿ ಬಸ್ಸಿನ ಡಾಂಬರು ರಸ್ತೆ ಬಿದ್ದು ಗಂಭೀರ ಸ್ವರೂಪದಲ್ಲಿ ಗಾಯಗೊಂಡಿರುವ ಘಟನೆ ಅಜೆಕಾರು ಕಾಡುಹೊಳೆ ಎಂಬಲ್ಲಿ ಸಂಭವಿಸಿದೆ. ಉಡುಪಿ ಖಾಸಗಿ ಕಾಲೇಜಿನ ಸಿ.ಎ ವಿದ್ಯಾರ್ಥಿನಿ ಅಭಿಜ್ಞಾ (18) ಘಟನೆಯಲ್ಲಿ ಗಾಯಗೊಂಡವಳು.
ಜನವರಿ 1ರ ಮಧ್ಯಾಹ್ನ 3.10ರ ವೇಳೆಗೆ ಅಜೆಕಾರು ಕಡೆಯಿಂದ ಲಕ್ಷ್ಮೀಶ ಬಸ್ಸಿನಲ್ಲಿ ಕಾಡುಹೊಳೆ ಜಂಕ್ಷನ್ ಕಡೆಗೆ ಬಂದಿದ್ದಳು. ನಿಂತಿದ್ದ ಬಸ್ಸಿನ ಮುಂದಿನ ಬಾಗಿಲಿನಿಂದ ಅಭಿಜ್ಞಾಳು ಇಳಿಯುತ್ತಿದ್ದಾಗ ಬಸ್ಸಿನ ಚಾಲಕನು ಏಕಾಏಕಿಯಾಗಿ ಬಸ್ಸನ್ನು ಅಜಾಗರೂಕತೆಯಿಂದ ಮುಂದಕ್ಕೆ ಚಲಾಯಿಸಿರುವುದು ಘಟನೆಗೆ ಕಾರಣವಾಗಿದೆ. ಅಭಿಜ್ಞಾಳು ಬಿದ್ದ ಪರಿಣಾಮ ಅಭಿಜ್ಞಾಳಿಗೆ ತೀವ್ರತರದಲ್ಲಿ ಗಾಯಗಳಾಗಿವೆ. ಬಸ್ಸಿನ ಡ್ರೈವರ್, ಕಂಡಕ್ಟರ್ ಹಾಗೂ ಸಾರ್ವಜನಿಕರ ಸಹಾಯದಿಂದ ಆಕೆಯನ್ನು ಮಣಿಪಾಲ ಕೆ.ಎಮ್.ಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಸ್ಸು ಚಾಲಕ ಶ್ರೀಕಾಂತ್ ವಿರುದ್ಧ ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಿಂದೆಯೂ ನಡೆದಿತ್ತು:
ಇಂತಹದೇ ಘಟನೆಯೊಂದು ಕಳೆದ ಕೆಲ ದಿನಗಳ ಹಿಂದೆ ಪುಲ್ಕೇರಿ ಬೈಪಾಸ್ ಬಳಿಯಲ್ಲಿ ಬೆಳಿಗ್ಗಿನ ಜಾವದಲ್ಲಿ ನಡೆದಿತ್ತು.
ಬಸ್ಸಿನ ಮುಂಬಾಗಿಲಿನಿಂದ ವಿದ್ಯಾರ್ಥಿನಿಯೊಬ್ಬಳು ಇಳಿಯುತ್ತಿದ್ದ ವೇಳೆಗೆ ಅದೇ ಬಾಗಿಲಿನಲ್ಲಿ ನೇತಾಡುತ್ತಿದ್ದ ಯುವಕನ ಕಾಲು ತಾಗಿ ವಿದ್ಯಾರ್ಥಿನಿಯೊಬ್ಬಳು ಡಾಂಬರು ರಸ್ತೆ ಬಿದ್ದಿದ್ದಳು. ಅದನ್ನು ಗಮನಿಸದೇ ಬಸ್ಸಿನ ನಿರ್ವಾಹಕ ಬಸ್ಸು ಚಲಾಯಿಸಲು ಸೂಚನೆ ನೀಡಿದನು. ಘಟನಾ ಸ್ಥಳದಲ್ಲಿ ಜಮಾಯಿಸಿ ಸಾರ್ವಜನಿಕರು ಬಸ್ಸಿನ ನಿರ್ವಹಕನಿಗೆ ತಕ್ಕಶಾಸ್ತಿ ಮಾಡಿ ಎಚ್ಚರಿಕೆ ನೀಡಿದರು.ಘಟನೆಯಲ್ಲಿ ವಿದ್ಯಾರ್ಥಿನಿಯೂ ಯಾವುದೇ ಅಪಾಯವಿಲ್ಲದೇ ಪಾರಾಗಿದ್ದಳು.