ಉಪ್ಪಿನಂಗಡಿ, ಜ.02 (DaijiworldNews/PY): ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಅಡ್ಡಹೊಳೆ ಸಮೀಪದಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಿ ಇಂಜಿನ್ ಪರೀಕ್ಷಿಸುತ್ತಿದ್ದ ಸಂದರ್ಭ ಕಾರಿನ ಚಾಲಕನ ಮೇಲೆ ಮರಬಿದ್ದು ಮೃತಪಟ್ಟಿರುವ ಘಟನೆ ಜ.2ರ ಭಾನುವಾರದಂದು ನಡೆದಿದೆ.
ಮೃತರನ್ನು ಮಂಗಳೂರಿನ ಪಾವಂಜೆಯಿಂದ ಕುಟುಂಬ ಸಮೇತರಾಗಿ ಬೆಂಗಳೂರಿಗೆ ತೆರಳುತ್ತಿದ್ದ ಸುರೇಶ್ ನಾವಡ (43) ಎಂದು ಗುರುತಿಸಲಾಗಿದೆ.
ಸುರೇಶ್ ನಾವಡ ಅವರು ಬೆಂಗಳೂರಿನ ಐಬಿಎಂ ಸಾಫ್ಟ್ವೇರ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಡಿ.23ರಂದು ಅವರ ತಾಯಿ ಮನೆ ಪಾವಂಜೆಗೆ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಬಂದಿದ್ದರು. ಜ.2ರಂದು ಬೆಳಗ್ಗೆ 5.30ರ ಸುಮಾರಿಗೆ ಸುರೇಶ್ ಅವರು ತನ್ನ ಪತ್ನಿ ಮಕ್ಕಳೊಂದಿಗೆ ಪಾವಂಜೆಯಿಂದ ಬೆಂಗಳೂರಿಗೆ ತನ್ನ ಕಾರಿನಲ್ಲಿ ಹೊರಟ್ಟಿದ್ದರು. ಬೆಳಗ್ಗೆ 7.30ರ ಸುಮಾರಿಗೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಅಡ್ಡಹೊಳೆ ಎನ್ನುವಲ್ಲಿ ತಲುಪಿದಾಗ ಏನೋ ಶಬ್ದ ಕೇಳಿ ಕಾರನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ, ಬಳಿಕ ಕಾರಿನಿಂದ ಇಳಿಯುತ್ತಿದ್ದಂತೆ ರಸ್ತೆ ಬದಿಯ ಅಭಯಾರಣ್ಯದಿಂದ ಮರವೊಂದು ಏಕಾಏಕಿ ಸುರೇಶ್ ಅವರ ಮೇಲೆ ತುಂಡಾಗಿ ಬಿದ್ದಿದೆ. ಇದರ ಪರಿಣಾಮ ತೀವ್ರ ಗಾಯಗೊಂಡ ಸುರೇಶ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಘಟನೆಯಿಂದ ಕಾರು ಸಂಪೂರ್ಣವಾಗಿ ಜಖಂಗೊಂಡಿದೆ. ಈ ವೇಳೆ ಪತ್ನಿ ಹಾಗೂ ಮಕ್ಕಳು ಕಾರಿನಲ್ಲೇ ಇದ್ದು, ಅಪಾಯದಿಂದ ಪಾರಾಗಿದ್ದಾರೆ.