ಕೋಟ, ಜ.02 (DaijiworldNews/PY): ಜಿಲ್ಲೆಯ ಕೋಟತಟ್ಟು ಬಾರಿಕೆರೆ ಕೊರಗ ಕಾಲನಿಯಲ್ಲಿ ನಡೆಯುತ್ತಿದ್ದ ಮೆಹೆಂದಿ ಕಾರ್ಯಕ್ರಮದ ವೇಳೆ ಪೊಲೀಸರಿಂದ ಹಲ್ಲೆಗೊಳಗಾದ ಕೊರಗ ನಿವಾಸಿಗಳನ್ನು ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲ್ ಕುಮಾರ್ ಭಾನುವಾರ ಭೇಟಿಯಾಗಿ ಧೈರ್ಯ ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, "ಘಟನೆಯನ್ನು ಖಂಡಿಸುವೆ ಮತ್ತು ಇದರ ಬಗ್ಗೆ ವಿಷಾಧವಿದೆ. ರಾಜ್ಯ ಪ್ರವಾಸದಲ್ಲಿದ್ದ ಹಿನ್ನೆಲೆಯಲ್ಲಿ ಆಗಮಿಸುವುದು ಒಂದೆರಡು ದಿನ ವಚನ ವಿಳಂಬವಾಗಿದೆ. ಜಿಲ್ಲೆಯಲ್ಲಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ಕೊರಗ ಸಮಾಜದವರ ಮನೆಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದ ವೇಳೆ ಅಧಿಕಾರಿಗಳಿಂದ ತಪ್ಪಾಗಿರುವುದನ್ನು ಸಮರ್ಥನೆ ಮಾಡಿಕೊಳ್ಳುವುದಿಲ್ಲ" ಎಂದರು.
"ಘಟನೆ ಬಳಿಕ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಕ್ಷಣದ ಕ್ರಮ ಕೈಗೊಂಡಿದ್ದಾರೆ. ಗೃಹಸಚಿವರು ಭೇಟಿ ನೀಡಿ ಗೃಹ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆಯಿಂದ ಅಗತ್ಯ ಕ್ರಮಕೈಗೊಳ್ಳಲು ಆದೇಶ ಮತ್ತು ಭರವಸೆ ನೀಡಿದ್ದಾರೆ. ಅಧಿಕಾರಿಗಳು ಇತಿ ಮಿತಿಯ ವ್ಯಾಪ್ತಿಯೊಳಗೆ ಕಾರ್ಯ ಮಾಡಲು ಜಿಲ್ಲಾಧಿಕಾರಿಗಳು ಮತ್ತು ಸಂಬಂದಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ" ಎಂದು ತಿಳಿಸಿದರು.
"ಸರಕಾರಿ ಇಲಾಖೆ ಕೆಲಸ ಮಾಡುವಾಗ ಯಾರ ಮನಸ್ಸಿಗೂ ನೋವಾಗದಂತೆ ನಡೆದುಕೊಳ್ಳಬೇಕು. ಕೊರಗ ಸಮುದಾಯದವರ ಮೇಲೆ ಸುಳ್ಳು ಕೇಸು ದಾಖಲು ಮಾಡಿರುವ ಬಗ್ಗೆ ಮಾತುಗಳು ಕೇಳಿಬಂದಿದ್ದು ಇಂದು ಕೂಡ ಜಿಲ್ಲಾಧಿಕಾರಿಗಳ ನೇತೃತ್ವ ಸಭೆ ನಡೆಸಲಾಗುತ್ತದೆ. ಈ ಕುಟುಂಬಕ್ಕೆ ಹಾಗೂ ಸಮಾಜಕ್ಕೆ ನ್ಯಾಯ ಒದಗಿಸಲು ಕಠಿಬದ್ಧರಾಗಿದ್ದೇವೆ. ಮುಂದೆ ಇಂತಹ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸಲು ಅಧಿಕಾರಿಗಳ ಹಂತದಲ್ಲಿ ಮಾತುಕತೆ ಮಾಡುತ್ತೇನೆ" ಎಂದು ಹೇಳಿದರು.